

ಕೊಪ್ಪಳ: ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್‌ನಿಂದ ಅಕ್ಟೋಬರ್ 2 ಮತ್ತು 3ರಂದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಕುರುಬ ಸಮುದಾಯದ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ ತಿಳಿಸಿದರು.
ದೇಶದ ವಿವಿಧಡೆ 12 ಕೋಟಿ ಕುರುಬ ಸಮುದಾಯದವರಿದ್ದಾರೆ. ಅವರನ್ನೆಲ್ಲ ಒಟ್ಟಗೂಡಿಸಿ ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ರಚಿಸಲಾಗಿದೆ. ಈಗಾಗಲೇ 8 ಸಮಾವೇಶ ನಡೆಸಲಾಗಿದೆ. 9ನೇ ಸಮಾವೇಶ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಏಕೈಕ ಸಿಎಂ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಗುವುದು.
ದೇಶದ ವಿವಿಧೆಡೆಯಿಂದ ಗಣ್ಯರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ನಾವು ರಾಜ್ಯಾದ್ಯಂತ ಸಂಚರಿಸಿ ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮುದಾಯದ ಜನರಿಗೆ ಕರೆ ಕೊಟ್ಟಿದ್ದೇವೆ. ಪ್ರಮುಖವಾಗಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡಿದ್ದು, ಅಧಿಕ ಸಂಖ್ಯೆಯಲ್ಲಿ ಜನರನ್ನು ಸೇರಿಸುತ್ತಿದ್ದೇವೆ ಎಂದರು.
ಸಿದ್ದರಾಮಯ್ಯ ಅವರನ್ನು ರಾಷ್ಟ್ರ ನಾಯಕರಾಗಿಸಲು ಸಮಾವೇಶ ವೇದಿಕೆಯಾ ಎಂಬ ಬಗ್ಗೆ ಪ್ರತಿಕ್ರಿಯಿಸಿ, ರಾಜಕಾರಣ ಎಲ್ಲದರಲ್ಲೂ ಇದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲ, ಜನ ಬಲ ಮುಖ್ಯ. ಸಿದ್ದರಾಮಯ್ಯ ಬಯಸಿದಲ್ಲಿ ಏನಾದರೂ ಆಗಬಹುದು. ರಾಜಕಾರಣದಲ್ಲಿ ಅದೃಷ್ಟ ಮತ್ತು ಅವಕಾಶ ಇದ್ದರೆ ಯಾವ ಹುದ್ದೆಗೆ ಬೇಕಾದರೂ ಹೋಗಲು ಅವಕಾಶವಿದೆ. ಇದೊಂದು ಪಕ್ಷಾತೀತ ಕಾರ್ಯಕ್ರಮ. ಸಮುದಾಯದ ಕಾರ್ಯಕ್ರಮವಾಗಿದ್ದು, ಎಲ್ಲರೂ ಭಾಗವಹಿಸಲಿದ್ದಾರೆಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್, ಪ್ರಮುಖರಾದ ವೈ.ಎನ್.ಗೌಡರ್ ಇತರರಿದ್ದರು.