ರಾಷ್ಟ್ರಮಟ್ಟದ ಎಂಆರ್‌ಎಫ್ ಬೈಕ್ ರ್ಯಾಲಿ ನಾಳೆ

VJO_0624-1-780x470
ಸಂಗ್ರಹ ಚಿತ್ರ
Published on

ಮಡಿಕೇರಿ: ಕೊಡಗಿನಲ್ಲಿ ಪ್ರಥಮ ಬಾರಿಗೆ ದ್ವಿಚಕ್ರ ವಾಹನದ ರಾಷ್ಟ್ರೀಯ ಚಾಂಪಿಯನ್‌ಶಿಪ್ ಎಂಆರ್‌ಎಫ್ ರ‌್ಯಾಲಿಯನ್ನು ಮೇ 21ರಂದು ಮಡಿಕೇರಿ ತಾಲೂಕಿನ ದೇವಸ್ತೂರು ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಪುತ್ತೂರು ಏಸ್ ಇವೆಂಟ್ಸ್ ಸಿಇಒ ಆಕಾಶ್ ಐತಾಳ್ ತಿಳಿಸಿದರು.
ರ‌್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಪತ್ರಕರ್ತ ಜಿ.ಚಿದ್ವಿಲಾಸ್ ಚಾಲನೆ ನೀಡಲಿದ್ದಾರೆ. ಇದೇ ವೇಳೆ ರ‌್ಯಾಲಿಯಲ್ಲಿ ಭಾಗವಹಿಸುವ ವಾಹನಗಳ ದಾಖಲೆ ಪರಿಶೀಲನೆ ನಡೆಯಲಿದೆ. 21ರಂದು ಬೆಳಗ್ಗೆ 7ರಿಂದ ಮದ್ಯಾಹ್ನ 2 ಗಂಟೆಯವರೆಗೆ ಸ್ಪರ್ಧೆ ನಡೆಯಲಿದೆ. ಸಂಜೆ ಅಬ್ಬಿದಾನ ರೆಸಾರ್ಟ್‌ನಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಆರ್‌ಎಫ್ ರ‌್ಯಾಲಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 125 ಬೈಕ್ ಸವಾರರು ಭಾಗವಹಿಸಲಿದ್ದಾರೆ. ವಿವಿಧ 9 ವಿಭಾಗದಲ್ಲಿ ರ‌್ಯಾಲಿ ನಡೆಯಲಿದ್ದು, ಕರ್ನಾಟಕ, ತಮಿಳುನಾಡು, ಕೇರಳ, ಚಂಡೀಗಡ, ಡಾರ್ಜಲಿಂಗ್, ಕೋಲ್ಕತ್ತಾ ಮತ್ತಿತರ ಕಡೆಗಳಿಂದ ರ‌್ಯಾಲಿ ಪಟುಗಳು ಪಾಲ್ಗೊಳ್ಳಲಿದ್ದಾರೆ. ಕಾಫಿ ತೋಟಗಳ ಮಧ್ಯೆ ಇಕ್ಕಟ್ಟಾದ ಹಾಗೂ ಎತ್ತರ ತಗ್ಗು ಪ್ರದೇಶಗಳಲ್ಲಿ ರ‌್ಯಾಲಿ ನಡೆಯಲಿದೆ. ಸುಮಾರು 80 ಕಿ.ಮೀ ದೂರವನ್ನು 3 ಸುತ್ತಿನಲ್ಲಿ ಸ್ಪರ್ಧಿಗಳು ಕ್ರಮಿಸಬೇಕಾಗುತ್ತದೆ ಎಂದರು.
ಅಂತಾರಾಷ್ಟ್ರೀಯ ರ‌್ಯಾಲಿ ಪಟು ಐಶ್ವರ್ಯ ಪಿಸೆ ಪುರುಷರೊಂದಿಗೆ ಸ್ಪರ್ಧಿಸುತ್ತಿರೋದು ವಿಶೇಷವಾಗಿದೆ. ಓಪನ್ ಕ್ಲಾಸ್‌ನಲ್ಲಿ ಈ ಬಾರಿ 8 ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್ ಹಾಗೂ ತಜ್ಞ ವೈದ್ಯರು ಇರಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರ‌್ಯಾಲಿ ಪಟುಗಳಾದ ನಟರಾಜ್, ಜತೀನ್ ಜೈನ್, ಇವೆಂಟ್ಸ್ ಸಂಚಾಲಕ ಕಟ್ಟೆಮನೆ ಸೋನಜಿತ್, ಸದಸ್ಯ ಕಟ್ಟೆಮನೆ ರೋಷನ್, ಪ್ರಮುಕರಾದ ಅಮನ್ ಪಾರ್ವೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net