ರಾಷ್ಟ್ರಪತಿ ಮುರ್ಮು ಅವರಿಗೆ ಪೌರ ಸನ್ಮಾನ

mayer
Published on

ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಹಾನಗರ ಪಾಲಿಕೆ ವತಿಯಿಂದ ಪೌರ ಸನ್ಮಾನ ಮಾಡಲಾಗುತ್ತಿದ್ದು, ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 26ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿ ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಮೈದಾನದಲ್ಲಿ ರಾಷ್ಟ್ರಪತಿ ಅವರಿಗೆ ಪೌರ ಸನ್ಮಾನ ನಡೆಯಲಿದೆ. ರಾಷ್ಟ್ರಪತಿ ಅವರಿಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರ ಬೆಳ್ಳಿಯ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಲಾಗುವುದು ಎಂದರು.
ಕಾರ್ಯಕ್ರಮಕ್ಕೆ 5 ಸಾವಿರ ಜನರಿಗೆ ಆಮಂತ್ರಣ ನೀಡಲಾಗುತ್ತಿದೆ. ಪಾಲಿಕೆಯ ಹಾಲಿ ಹಾಗೂ ಮಾಜಿ ಸದಸ್ಯರು, ಮಾಜಿ ಶಾಸಕರು, 500 ಜನ ಪೌರ ಕಾರ್ಮಿಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಪತಿ ಅವರು ಅವಳಿ ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಹಾನಗರವನ್ನು ಸ್ವಚ್ಛಗೊಳಿಸಿ, ಅಂದಗೊಳಿಸಲಾಗುವುದು. ವಿದ್ಯುತ್ ದೀಪಗಳನ್ನು ಬೆಳಗಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲೆಯ ಶಾಸಕರು ಪಾಲ್ಗೊಳ್ಳುವರು ಎಂದರು.
ಸಮಾರಂಭ ಸುಮಾರು 70 ನಿಮಿಷಗಳವರೆಗೆ ನಡೆಯಲಿದೆ. ರಾಷ್ಟ್ರಪತಿ ಅವರೊಂದಿಗೆ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ೆಟೊ ತೆಗೆಯಿಸಿಕೊಳ್ಳುವ ವಿಚಾರ ಇದ್ದು, ಈ ಬಗ್ಗೆ ರಾಷ್ಟ್ರಪತಿ ಭವನದಿಂದ ಅನುಮತಿ ಕೇಳಲಾಗಿದೆ ಎಂದು ಹೇಳಿದರು.
ಮಾಜಿ ಮೇಯರ್ ವೀರಣ್ಣ ಸವಡಿ ಮಾತನಾಡಿ, ಜಿಮಖಾನಾ ಮೈದಾನದಲ್ಲಿ 30 ಸಾವಿರ ಚದುರ ಅಡಿಯ ಟೆಂಟ್ ಹಾಕಲಾಗುತ್ತಿದೆ. 60/30 ಅಳತೆಯ ವೇದಿಕೆ ನಿರ್ಮಿಸಲಾಗುತ್ತಿದೆ. ಕಿಮ್ಸ್ ಮೈದಾನ, ಸಮೀಪದ ಶಾಲಾ-ಕಾಲೇಜುಗಳ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಯೋಚಿಸಲಾಗುತ್ತಿದೆ. ಕಾರ್ಯಕ್ರಮದ ನಂತರ ಸವಾಯಿ ಗಂಧರ್ವ ಸಭಾಂಗಣದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಪ್ರತಿಪಕ್ಷ ನಾಯಕ ದೊರೈರಾಜ ಮಣಿಕುಂಟಲ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net