

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆ. 5ರಂದು ನಗರಕ್ಕೆ ಆಗಮಿಸಲಿದ್ದಾರೆ.
ರಾಷ್ಟ್ರಪತಿ ಭೇಟಿ ಕಾರ್ಯಕ್ರಮದ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.
ಮಧ್ಯಾಹ್ನ 12.30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಷ್ಟ್ರಪತಿ, ನಂತರ ತಮಿಳುನಾಡಿನ ಮಧುಮಲೈಗೆ ತೆರಳುವರು. ಬಳಿಕ ಸಂಜೆ 5.45ಕ್ಕೆ ಮತ್ತೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಚೆನ್ನೈಗೆ ತೆರಳುವರು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮಾಹಿತಿ ನೀಡಿದರು.
ರಾಷ್ಟ್ರಪತಿ ಆಗಮಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಅನನುಕೂಲ ಆಗದಂತೆ ಶಿಷ್ಟಾಚಾರ ಪಾಲನೆಯಾಗಬೇಕು. ಆ ಪ್ರಕಾರ ವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಗೊಂದಲಕ್ಕೆ ಆಸ್ಪದ ಇಲ್ಲದಂತೆ ಅಧಿಕಾರಿಗಳು ಸಮನ್ವಯದೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ವಿಮಾನ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಪರಿಶೀಲಿಸಬೇಕು. ಅದೇ ರೀತಿ ವಿದ್ಯುಚ್ಛಕ್ತಿ ಹಾಗೂ ಪರ್ಯಾಯ ವ್ಯವಸ್ಥೆ ಸಮರ್ಪಕವಾಗಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ವರದಿ ನೀಡಬೇಕು ಎಂದು ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ವೈದ್ಯರ ತಂಡ, ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಆಹಾರ ಸುರಕ್ಷತೆ, ಭದ್ರತೆಗೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.
ನಗರಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.