

ದಾವಣಗೆರೆ: ಜಿಲ್ಲೆಯ ಎಲ್ಲ ಗ್ರಾಪಂ, ಸರ್ಕಾರಿ ಕಚೇರಿಗಳಲ್ಲಿ ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ರಾಷ್ಟ್ರಧ್ವಜಾರೋಹಣ ಮಾಡಬೇಕು. ಧ್ವಜಕ್ಕೆ ಅಗೌರವ ತೋರುವ ಪ್ರಕರಣಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಆಕರ್ಷಕ ಮತ್ತು ಸಂಭ್ರಮಾಚರಣೆ ಬಿಂಬಿಸುವ 3 ರಿಂದ 4 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಲು, ಆಕರ್ಷಕ ಪಥಸಂಚಲನಕ್ಕೆ ಸಿದ್ಧತೆ ನಡೆಸುವಂತೆ ತಿಳಿಸಿದರು.
ಪಾಲಿಕೆಯಿಂದ ವೇದಿಕೆ, ಅಲಂಕಾರ, ಶಾಮಿಯಾನ, ಆಸನದ ವ್ಯವಸ್ಥೆ, ಹೂವಿನ ಅಲಂಕಾರ ಕೈಗೊಳ್ಳಲು ಸೂಚನೆ ನೀಡಿ ಎಲ್ಲಾ ಇಲಾಖೆ ಅಧಿಕಾರಿ- ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಹೆಚ್ಚುವರಿ ರಕ್ಷಣಾಧಿಕಾರಿ ರಾಮಗೊಂಡ ಬಸರಗಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು.
---