

ಬೇಲೂರು: 12ನೇ ಶತಮಾನದ ಬಸವಾದಿ ಶರಣರು ಸ್ತ್ರೀಯರಿಗೆ ಪ್ರಥಮವಾಗಿ ಸಮಾನತೆ ನೀಡುವ ಮೂಲಕ ಸಮ ಸಮಾಜದ ಪರಿಕಲ್ಪನೆಗೆ ಮುನ್ನುಡಿ ಬರೆದಿದ್ದ ರೀತಿಯಲ್ಲೇ ಇಂದು ರಾಷ್ಟ್ರದ ಪ್ರಗತಿಗಾಗಿ ಸ್ತ್ರೀಯರಿಗೆ ಶಿಕ್ಷಣ ಹಾಗೂ ಸಮಾನತೆ ನೀಡಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಮೊಗಸಾವರ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀಸುಗ್ಗಿ ದೇವಿರಮ್ಮ ಹಾಗೂ ಶ್ರೀಕುದುರೆ ಕುಮಾರಸ್ವಾಮಿ ನೂತನ ದೇಗುಲದ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಸೃಷ್ಟಿಗೆ ಕಾರಣ ಸ್ತ್ರೀ, ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ದೇವತೆಯನ್ನು ಪೂಜಿಸುತ್ತೇವೆ. ಮೌನದಿಂದಲೇ ಭಕ್ತಿಯನ್ನು ಸಮರ್ಪಿಸಿದ ಸಂತರ ಜೀವನದ ಸಂದೇಶ ನಮಗೆ ದಾರಿದೀಪವಾಗಬೇಕು. ನಮ್ಮ ನಾಡಿನಲ್ಲಿ ಅವತರಿಸಿದ ಮಹಾನ್ ಪುರುಷರು ಹಾಗೂ ದೇವರನ್ನು ಮನುಕುಲ ಅನುಸರಿಸಬೇಕು. ಗ್ರಾಮಕ್ಕೊಂದು ದೇಗುಲ ಕಟ್ಟಿದರೆ ಸಾಲದು, ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು. ಮೊಗಸಾವರ ಗ್ರಾಮದಲ್ಲಿ 200 ವರ್ಷಗಳ ಹಿಂದೆ ಜನ್ಮತಾಳಿದ ಸುಗ್ಗಿ ದೇವಿರಮ್ಮ ಈ ಭಾಗದ ಶಕ್ತಿ ದೇವತೆಯಾಗಿದೆ. ಆದ್ದರಿಂದ ಗ್ರಾಮಸ್ಥರು ಸೇರಿ ಸುಂದರ ದೇಗುಲ ನಿರ್ಮಿಸಿದ್ದಾರೆ. ವಿಶೇಷವಾಗಿ ಸ್ತ್ರೀಯರು ಸಮವಸ್ತ್ರ ಧರಿಸಿ ಕಾರ್ಯಕ್ರಮಕ್ಕೆ ಅರ್ಥ ಕಲ್ಪಿಸಿದ್ದಾರೆ. ಪ್ರತಿ ಮನೆ ಮನೆಯಲ್ಲೂ ಮಹಿಳೆಯರು ಕುಟುಂಬದ ಅರ್ಥಿಕ ನಿರ್ವಹಣೆಗೆ ಸ್ವಾವಲಂಬಿ ಬದುಕು ಸಾಗಿಸಲು ಪಣ ತೊಡಬೇಕು. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದರು.
ಕಾರ್ಜುವಳ್ಳಿ ಮಠದ ಶ್ರೀಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯಾವ ಸಮಾಜದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡುತ್ತಾರೋ ಅಲ್ಲಿ ದೇವತೆಗಳು ಇರುತ್ತಾರೆ ಎಂದು ಪುರಾಣ ಹೇಳುವಂತೆ ಮೊದಲು ಮಹಿಳೆಯರಿಗೆ ಗೌರವ ನೀಡಬೇಕು. ಕುಟುಂಬದಲ್ಲಿ ಮಕ್ಕಳಿಗೆ ಮೊದಲ ಗುರುವಾಗಿ ಸಂಸ್ಕಾರ ನೀಡುವ ತಾಯಿಯನ್ನು ಹಿಂದಿನಿಂದಲೂ ಶಕ್ತಿದೇವತೆ ಸ್ವರೂಪದಲ್ಲಿ ಪೂಜಿಸುತ್ತಾ ಬರಲಾಗಿದೆ ಎಂದರು.
ಶಾಸಕ ಕೆ.ಎಸ್.ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ದೇಗುಲ ಸಮಿತಿ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್, ಜಿಪಂ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ, ವೀರಶೈವ ಮಹಾಸಭಾ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಕೌಶಿಕ್, ಅರೇಹಳ್ಳಿ ನಟರಾಜ್, ಯಶವಂತ್, ಗೌರವಾಧ್ಯಕ್ಷ ರುದ್ರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೋಮಲಾ ಇತರರಿದ್ದರು.