

ಅರಸೀಕೆರೆ ಗ್ರಾಮಾಂತರ : ಭಾರತೀಯರು ಒಂದಾಗುವುದರ ಮೂಲಕ ರಾಷ್ಟ್ರ ಸಂಘಟನೆ ಮತ್ತು ರಕ್ಷಣೆಗಾಗಿ ವಿಶ್ವಕ್ಕೆ ಶಾಂತಿ ಸಂದೇಶ ನೀಡಲು ಮುಂದಾಗಬೇಕು. ದೇಶ ರಕ್ಷಣೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿ ಶಕ್ತಿ ನೀಡೋಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್ ಕುಮಾರ್ ಡಿ.ವಡಿಗೇರಿ ಕರೆ ನೀಡಿದರು.
ನಗರದ ಹೊರವಲಯದ ಕರ್ನಾಟಕ ಪಬ್ಲಿಕ್ ಶಾಲೆ, ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸಂಘಟನೆಯಿಂದ ಗುರುವಾರ ಆಯೋಜಿಸಲಾಗಿದ್ದ ಬೃಹತ್ ತಿರಂಗಾ ಯಾತ್ರೆಗೂ ಮುನ್ನ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಭಾರತ ವಿಶ್ವಕ್ಕೆ ಗುರುವಾಗಿರುವ ಇತಿಹಾಸವನ್ನು ಸಾವಿರಾರು ವರ್ಷಗಳಿಂದಲೂ ಸಾಕ್ಷೀಕರಿಸುತ್ತಿವೆ. ಇಂತಹ ಪವಿತ್ರ ದೇಶದಲ್ಲಿ ಹುಟ್ಟಿದ ಭಾರತೀಯರು ಸುಸಂಸ್ಕೃತರಾಗಿ ಸಂಸ್ಕೃತಿಗೆ ಕೊಡುಗೆಯಾಗಿದ್ದಾರೆ. ಹಲವಾರು ಸಮಯದಲ್ಲಿ ನಮ್ಮ ದೇಶದೊಂದಿಗೆ ನಡೆದ ಯುದ್ಧಗಳಲ್ಲಿ ನಮ್ಮ ಯೋಧರು ಹುತಾತ್ಮರಾದ್ದರಿಂದಲೇ ದೇಶದೊಳಗೆ ನಾವೆಲ್ಲರೂ ಕ್ಷೇಮವಾಗಿದ್ದೇವೆ. ಇತ್ತೀಚೆಗೆ ಕಾಶ್ಮೀರ ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದಲ್ಲಿನ ಉಗ್ರರ ಅಡಗುದಾಣಗಳನ್ನು ನಾಶ ಮಾಡುವ ತಕ್ಕ ಉತ್ತರವನ್ನು ನೀಡಿದೆ. ನಮ್ಮ ಸೈನಿಕರು ನಮಗೆ ಸ್ಫೂರ್ತಿಯಾಗಿದ್ದು, ಅವರನ್ನು ಸ್ಮರಿಸೋಣ, ಅವರಿಗೆ ರಕ್ಷಣೆ ನೀಡೋಣ, ಅವರ ಕುಟುಂಬದ ಸದಸ್ಯರಿಗೆ ದೇಶದೊಳಗೆ ಸೈನಿಕರಾಗಿ ಕಾಯೋಣ. ಯುವ ಜನಾಂಗವು ದೇಶ ರಕ್ಷಣೆ ನಮ್ಮೆಲ್ಲರ ಹೊಣೆ ಮಂತ್ರದೊಂದಿಗೆ ದೇಶದ ಅಭಿವೃದ್ಧಿಗೆ ಮುಂದಾಗಲಿ ಎಂದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬೃಹತ್ ತಿರಂಗಾ ಧ್ವಜವನ್ನು ಮೆರವಣಿಗೆ ಮಾಡಿ, ದೇಶಭಕ್ತಿ ಘೋಷಣೆಗಳನ್ನು ಕೂಗಿ ಸಾಗಿದರು. ಮಾಜಿ ಸೈನಿಕರ ಸಮನ್ವಯ ಸಮಿತಿ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿ ಮೆರುಗು ನೀಡಿದರು. ಮೆರವಣಿಗೆಯು ಬಿ.ಎಚ್ ರಸ್ತೆಯ ಮೂಲಕ ಪ್ರವಾಸಿ ಮಂದಿರ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಮಾರೋಪಗೊಂಡಿತು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಎ.ಎಸ್.ಸಲ್ಮಾ, ಒಂದನೇ ಅಧಿಕ ಸಿವಿಲ್ ನ್ಯಾಯಾಧೀಶೆ ಮಮತಾ, 2ನೇ ಅಧಿಕ ಸಿವಿಲ್ ನ್ಯಾಯಾಧೀಶೆ ಪೂಜಾ ಎಸ್.ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಶಶಾಂಕ್ ಇದ್ದರು.
ಸಮಾರೋಪ ಸಮಾರಂಭದಲ್ಲಿ ದೊಡ್ಡಮೇಟಿ ಕುರ್ಕೆ ಬೂದಿಹಾಳ್ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿ, ನಮ್ಮ ದೇಶದ ವಿಷಯಕ್ಕೆ ಬಂದಾಗ ಜಾತಿ, ಮತ, ಪಕ್ಷಭೇದ ಮರೆತು ದೇಶದ ಒಳಿತಿಗೆ ನಾವು ಮುಂದಾಗಬೇಕು ಎಂದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ನವಲಗುಂದ್, ವಕೀಲರ ಸಂಘದ ಅಧ್ಯಕ್ಷ ಕೆ.ಜಿ ಸದಾನಂದ್, ಕಾರ್ಯದರ್ಶಿ ಎಸ್.ಪ್ರಕಾಶ್, ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ಎಸ್ ಪ್ರಕಾಶ್ , ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ತಂಡದ ಸಂಘಟಕರಾದ ಯತೀಶ್ ಕುಮಾರ್, ಸುನೀಲ್ ಕುಮಾರ್, ಅವಿನಾಶ್ ನಾಯ್ಡು, ಜಿವಿಟಿ, ಬಸವರಾಜು, ಎನ್.ಡಿ.ಪ್ರಸಾದ್, ಮನೋಜ್ ಕುಮಾರ್, ಸುನೀಲ್, ಕಿರಣ್ ಬಾಣಾವರ, ಮಂಜುನಾಥ್, ಮನು, ಸಿಂಧು, ಮಾಜಿ ಸೈನಿಕ ನವೀನ್, ನಾಗಭೂಷಣ್, ವಿದ್ಯಾಧರ್, ಟಿ.ಆರ್ ನಾಗರಾಜು, ಸಿದ್ದೇಶ್, ವಿನೋದ್ ಜೈನ್ ಚೇತನ್ ಜೈನ್ , ಜಿ.ವಿ ಬಸವರಾಜು, ಬಾಣಾವರ ಜಯಣ್ಣ, ಕಿರಣ್ ಕುಮಾರ್, ಸರ್ವೇ ಚಂದ್ರುರಾಜು ಸೇರಿದಂತೆ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಮುಖಂಡರು, ಭಾಗವಹಿಸಿದ್ದರು.