ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ.

ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ.
Published on

ಬೇಲೂರು: ಬೇಲೂರು ಕಬ್ಬಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯ ಮೂರನೇ ದಿನದಾಟದ ಪುರುಷರ ಅಂತಿಮ ಫೈನಲ್ ಪಂದ್ಯದಲ್ಲಿ ಭಾನುವಾರ ರಾತ್ರಿ ಬೆಂಗಳೂರಿನ ಆರ್‌ಡಬ್ಲ್ಯೂಎಫ್ ತಂಡ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಎಂಇಜಿ ತಂಡ ಪಡೆದು ಕೊಂಡಿತು.


ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯದಲ್ಲಿ ಮಹಿಳಾ ತಂಡಗಳು ಸೇರಿದಂತೆ 36 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ಮಹಿಳೆಯರ ತಂಡ ಹಾಗೂ ಪುರುಷರ ತಂಡಗಳ ಪೈಪೋಟಿಯನ್ನು ಪ್ರತಿನಿತ್ಯ ಸಾವಿರಾರು ಜನರು ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. ಪಂದ್ಯಾವಳಿಯಲ್ಲಿ ಅಂತಿಮವಾಗಿ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾದ 1 ಲಕ್ಷ ರೂ, ಹಾಗೂ ಪಾರಿತೋಷಕವನ್ನು ಬೆಂಗಳೂರಿನ ಆರ್‌ಡಬ್ಲ್ಯೂಎಫ್ ತಂಡ ಪಡೆದರೆ, ದ್ವಿತೀಯ ಬಹುಮಾನವಾದ 75 ಸಾವಿರ ರೂ, ಪಾರಿತೋಷಕವನ್ನು ಬೆಂಗಳೂರಿನ ಎಮ್‌ಇಜಿ ತಂಡ ಪಡೆಯಿತು. ತೃತೀಯ ಬಹುಮಾನ 50 ಸಾವಿರ ರೂ, ಪಾರಿತೋಷಕವನ್ನು ಬೆಂಗಳೂರಿನ ಎಎಸ್‌ಇ, ನಾಲ್ಕನೇ ಬಹುಮಾನ 25 ಸಾವಿರ ರೂ, ಪಾರಿತೋಷಕವನ್ನು ಮಂಡ್ಯ ತಂಡ ಪಡೆಯಿತು.


ಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಬಾಗಲಕೋಟೆಯ ಚಿಂಚೊಳ್ಳಿ ಮಹಾಕಾಳಿ ತಂಡ ಪ್ರಥಮ ಬಹುಮಾನ 25 ಸಾವಿರ ರೂ, ಪಾರಿತೋಷಕ. ರಾಮನಗರ ತಂಡ ದ್ವಿತೀಯ ಬಹುಮಾನ 20 ಸಾವಿರ ರೂ, ಪಾರಿತೋಷಕ, ಮೈಸೂರು ತಂಡ ತೃತೀಯ ಬಹುಮಾನ 15 ಸಾವಿರ ರೂ, ಪಾರಿತೋಷಕ ಹಾಗೂ ಚಿಕ್ಕಮಗಳೂರು ತಂಡ ನಾಲ್ಕನೇ ಬಹುಮಾನ 10 ಸಾವಿರ ರೂ, ಪಾರಿತೋಷಕ ಪಡೆದು ಕೊಂಡವು.


ಪಂದ್ಯಾವಳಿಯ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಬೆಂಗಳೂರಿನ ಎಂಇಜಿ ತಂಡದ ಅಶ್ವಿನ್, ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಬೆಂಗಳೂರಿನ ಎಎಸ್‌ಸಿ ತಂಡದ ಹರೀಂದರ್, ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಬೆಂಗಳೂರಿನ ಆರ್‌ಡಬ್ಲ್ಯೂಎಫ್ ತಂಡದ ಆನಂದ ಪಡೆದು ಕೊಂಡರು.


ಫೈನಲ್ ಪಂದ್ಯಕ್ಕೂ ಮುನ್ನ ಕ್ರೀಡಾಪಟಗಳನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಬೇಲೂರು ಪಟ್ಟಣದಲ್ಲಿ ಈಗಾಗಲೇ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಮತ್ತು 1 ಕೋಟಿ ರೂ, ಅನುದಾನದಲ್ಲಿ ಈಗಿರುವ ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಕ್ರೀಡೆ ಉತ್ತೇಜಿಸುವ ನಿಟ್ಟಿನಲ್ಲಿ ಬೇಲೂರು ಕಬ್ಬಡಿ ಸ್ಪೋರ್ಟ್ಸ್ ಕ್ಲಬ್ ಮುಂದಾಗಿದ್ದು, ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವ ಜೊತೆಗೆ ಮುಂದಿನ ದಿನದಲ್ಲಿ ಸ್ವಂತವಾಗಿ ಎರಡು ಅಂಕಣಗಳಿಗೆ ಬೇಕಾಗುವಷ್ಟು ಮ್ಯಾಟ್‌ಗಳನ್ನು ಕೊಡಿಸಲಾಗುವುದು ಎಂದರು.


ಬೇಲೂರು ಕಬ್ಬಡಿ ಸ್ಪೋರ್ಟ್ಸ್ ಅಧ್ಯಕ್ಷ ಸಿ.ಹೆಚ್.ಮಹೇಶ್ ಮಾತನಾಡಿ, ನಮ್ಮ ಕ್ಲಬ್ ಸ್ಥಾಪನೆಯಾಗಿ 10 ವರ್ಷವಾದ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ 4 ನೇ ವರ್ಷದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ಬು ಆಯೋಜಿಸಿದ್ದು, ಇದರಲ್ಲಿ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಭಾಗವಹಿಸಿ ಆಟವಾಡಿರುವುದು ನಮಗೆ ಹೆಮ್ಮೆ ಎನಿಸಿದೆ. ಈ ಕ್ರೀಡಾಕೂಟ ಆಯೋಜಿಸಲು ಸಹಕರಿಸಿದ ಕ್ಲಬ್ ಸದಸ್ಯರು, ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಹಾಸನ ಕ್ಷೇತ್ರದ ಶಾಸಕ ಪ್ರೀತಮ್.ಜೆ.ಗೌಡ, ಬಿಜೆಪಿ ಜಿಲ್ಲಾದ್ಯಕ್ಷ ಹೆಚ್.ಕೆ.ಸುರೇಶ್, ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್, ಒಕ್ಕಲಿಗ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುರಭಿರಘು, ಭಾರತ ತಂಡದ ಮಾಜಿ ಕಬ್ಬಡಿ ಆಟಗಾರ ಬಿ.ಸಿ.ಸುರೇಶ್, ಬೇಲೂರು ಕಬಡ್ಡಿ ಕ್ಲಬ್ ಸದಸ್ಯರಾದ ಮಹೇಶ್ ,ಖಾದರ್, ವಿಜಯ್, ಭರತ್, ಸತೀಶ್, ನಾಗರಾಜ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net