ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು

8BLK1A
ಭಾಲ್ಕಿಯ ಪ್ರಯಾಗ ಫಂಕ್ಷನ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಹಿರೇಮಠ ಸಂಸ್ಥಾನದ ಶ್ರೀ ಮಹಾಲಿಂಗ ಸ್ವಾಮೀಜಿ, ಅಣದೂರಿನ ವರಜ್ಯೋತಿ ಭಂತೆ, ಪ್ರೇರಣಾತಾಯಿ ಭೋಸ್ಲೆ ತೋರಣೇಕರ್, ಎಚ್.ಜಿ.ಸುರೇಶ, ಸೂರ್ಯಕಾಂತ ಸುಂಟೆ, ದತ್ತಾತ್ರಿ ಕಾಟಕರ ಇತರರಿದ್ದರು.
Published on

ಭಾಲ್ಕಿ: ದೇಶದ ಮುಂಬರುವ ಪ್ರಜೆಗಳನ್ನು ನಿರ್ಮಾಣ ಮಾಡಬೇಕಾದ ಅತ್ಯಂತ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಪ್ರಯಾಗ ಫಂಕ್ಷನ್ ಹಾಲ್ ನಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಪ್ರಧಾನವಾದ ನಮ್ಮ ದೇಶದಲ್ಲಿ ಗುರುಕುಲ ಪದ್ಧತಿ ಎತ್ತಿ ಹಿಡಿಯಲಾಗಿದೆ. ಶಿಕ್ಷಕರ ವೃತ್ತಿ ಒಂದು ಸಾಮಾಜಿಕ ಸೇವೆಯಾಗಿದ್ದು, ಅದನ್ನು ಕಾಪಾಡಿಕೊಂಡು ಹೋಗುವುದು ಎಲ್ಲ ಶಿಕ್ಷಕರ ಕರ್ತವ್ಯವಾಗಿದೆ ಎಂದರು.

ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಕಲ್ಯಾಣ ಕರ್ನಾಟಕಕ್ಕೆ ಪ್ರತಿವರ್ಷ ಶಿಕ್ಷಣಕ್ಕೆ ಹೆಚ್ಚುವರಿಯಾಗಿ ಶಿಕ್ಷಣ ಅವಿಸ್ಕಾರ ರೂಪದಲ್ಲಿ ೧೨೫ ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ೩ ವರ್ಷಗಳ ಅವಧಿಯಲ್ಲಿ ಬೀದರ್ ಜಿಲ್ಲೆಗೆ ಶಿಕ್ಷಣಕ್ಕಾಗಿ ೪.೫ಕೋಟಿ ರೂ. ಅನುದಾನ ಒದಗಿಸಲಾಗಿದೆ. ಜೂನ್‌ನಲ್ಲಿಯೇ ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಕೊಳ್ಳಲಾಗಿದೆ. ಶಿಕ್ಷಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ಕಾರ್ಯಮಾಡಬೇಕು ಎಂದು ಹೇಳಿದರು.

ಹಿರೇಮಠ ಸಂಸ್ಥಾನದ ಶ್ರೀ ಮಹಾಲಿಂಗ ಸ್ವಾಮೀಜಿ, ಅಣದೂರಿನ ವರಜ್ಯೋತಿ ಭಂತೆ, ಪ್ರೇರಣಾತಾಯಿ ಭೋಸ್ಲೆ ತೋರಣೇಕರ್ ಸಾನ್ನಿಧ್ಯ ವಹಿಸಿದ್ದರು. ಉಪನಿರ್ದೆಶಕ ಎಚ್.ಜಿ.ಸುರೇಶ ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ ಮಾತನಾಡಿದರು.

ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಅಮೃತರಾವ ಚಿಮಕೋಡೆ, ಸೋಮಶೇಖರ ಬಿರಾದಾರ ಚಿದ್ರಿ, ರವೀಂದ್ರರೆಡ್ಡಿ ಮಾಲಿಪಾಟೀಲ, ಮಹಬೂಬ್ ಪಟೇಲ್, ಶಶಿಕಲಾ ಸಿಂಧನಕೆರೆ, ವಿಜಯಕುಮಾರ ರಾಜಭವನ, ಹಣಮಂತರಾವ ಚವ್ಹಾಣ್, ಶಿವಕುಮಾರ ಸದಾಫುಲೆ, ಪ್ರಶಾಂತ ರಾಗಾ, ಸೂರ್ಯಕಾಂತ ಪಾಟೀಲ, ಶಿವರಾಜ ಕಪಲಾಪುರೆ, ವೈಜಿನಾಥ ಸಾಗರ, ರಾಜಕುಮಾರ ಬಿರಾದಾರ, ಬಸವರಾಜ ಜಕ್ಕಾ, ಚಂದ್ರಶೇಖರ ಬನ್ನಾಳೆ, ರಾಜಕುಮಾರ ಜೋಳದಪಕೆ, ಅಶೋಕ ತಾಂಬೋಳೆ, ಹಣಮಂತ ಕಾರಾಮುಂಗೆ, ಭೀಮಣ್ಣಾ ಕೊಂಕಣೆ, ಉತ್ತಮ ಸಿಂಧೆ, ಸಂಜಯಕುಮಾರ ಬಿರಾದಾರ, ಗುರುಪ್ರಸಾದ, ಮಜಹರ ಹುಸೇನ, ಸಿದ್ದವೀರಯ್ಯ ರುದನೂರ, ಶಿವಕುಮಾರ ಫುಲಾರಿ, ಜಾಲಿಂದ್ರ ಮೇತ್ರೆ, ಮಲ್ಲಿಕಾರ್ಜುನ ಕನ್ನಾಳೆ, ಸಂತೋಷ ಸ್ವಾಮಿ, ಕುಸುಮಕುಮಾರಿ ರೆಡ್ಡಿ, ಚೈತನ್ಯಾ ಚನಶೆಟ್ಟಿ ಇದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಮನೋಹರ ಹೋಳಕರ ವಂದಿಸಿದರು. ೨೦೨೪-೨೫ನೇ ಸಾಲಿನ ೧೫ ಶಿಕ್ಷಕರಿಗೆ ಮತ್ತು ೨೦೨೫-೨೬ನೇ ಸಾಲಿನ ೧೪ ಶಿಕ್ಷಕರು ಸೇರಿ ಒಟ್ಟು ೨೯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಮ್ಮ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ನುಡಿದಂತೆ ನಡೆದಿದ್ದು, ಈ ಹಿಂದೆ ತಿಳಿಸಿದ ಹಾಗೆ ಎನ್‌ಪಿಎಸ್ ರದ್ದು ಗೊಳಿಸಿ ಒಪಿಎಸ್ ಜಾರಿ ಮಾಡುವಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಭಾಲ್ಕಿಯಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಲು ವಿನ್ಯಾಸ ಕಲ್ಪಿಸಲಾಗಿದೆ. ಬರುವ ವರ್ಷದ ಒಳಗೆ ಕಚೇರಿ ನಿರ್ಮಿಸಲಾಗುವುದು.

| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net