

ಚಿಕ್ಕೋಡಿ: ಹಾನಗಲ್ ಕುಮಾರ ಸ್ವಾಮಿಗಳು ಬಸವಾದಿ ಶಿವಶರಣರ ಸದಾಶಯದ ಜಾತಿ ವರ್ಗ, ವರ್ಣ ರಹಿತ ರಾಷ್ಟ್ರ ನಿರ್ಮಾಣಕ್ಕೆ ಅಹೋರಾತ್ರಿ ಶ್ರಮಿಸಿದ ದಿವ್ಯಚೇತನ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಚಿಕ್ಕೋಡಿ ಪಟ್ಟಣದ ಕೇಶವ ಕಲಾಭವನದಲ್ಲಿ 11 ದಿನಗಳ ಕಾಲ ಸಂಪಾದನಾ ಚರಮೂರ್ತಿ ಮಠದ ಸಹಯೋಗದಲ್ಲಿ ಸಾಯಿ ಸೇವಾ ಪರಿವಾರ, ವೀರಶೈವ ತರುಣ ಸಂಘ, ಸಿಎಲ್‌ಇ ಸಂಸ್ಥೆ ಸೇರಿ ವಿವಿಧ ಸಂಘಟನೆಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಹಾನಗಲ್ಲ ಕುಮಾರ ಮಹಾ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಾನಗಲ್ ಕುಮಾರ ಸ್ವಾಮಿಗಳು ಕನ್ನಡ ನಾಡು ಕಂಡ ಅಪೂರ್ವ ತ್ಯಾಗಯೋಗಿಗಳು ಎಂದರು.
ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಧರ್ಮ ಜಾಗೃತಿ ಜತೆಗೆ ಶಿಕ್ಷಣ ವ್ಯವಸ್ಥೆ ಉತ್ತರ ಕರ್ನಾಟಕದಲ್ಲಿ ಬೆಳೆಯಬೇಕಾದರೆ ಅದು ಹಾನಗಲ್ ಕುಮಾರಸ್ವಾಮಿಗಳ ಶಕ್ತಿಯಿಂದಲೇ ಎಂದು ಹೇಳಬಹುದು. ಇಂತಹ ಮಹಾನ್ ತ್ಯಾಗಿಗಳ ಇತಿಹಾಸ ಇಂದಿನ ಪೀಳಿಗೆಗೆ ಅವರ ಜೀವನ ದರ್ಶನ ಪ್ರವಚನದ ಮೂಲಕ ಪರಿಚಯಿಸುವ ಕೆಲಸವನ್ನು ಮಠ ಮಾನ್ಯಗಳು ಮಾಡಬೇಕೆಂದು ಹೇಳಿದರು.
ಚಿಂಚಣಿ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಹಾನಗಲ್ ಕುಮಾರ ಸ್ವಾಮಿಗಳು ಸ್ಥಾಪಿಸಿರುವ ಶಿವಯೋಗ ಮಂದಿರ ಹಾಗೂ ಚಿಕ್ಕೋಡಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ಅವರ 155ನೇ ಜಯಂತಿ ಮಹೋತ್ಸವ ಆಚರಿಸುವ ಭಾಗ್ಯ ಚಿಕ್ಕೋಡಿಗರಿಗೆ ಲಭಿಸಿದ್ದು, 11 ದಿನಗಳ ಕಾಲ ಅವರ ಜೀವನ ಚರಿತ್ರೆ ಕೇಳಿ ಎಲ್ಲರೂ ಪಾವನರಾಗೋಣ ಎಂದರು.
ಸಂಪಾದನಾ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವೀಣಾ ಕವಟಗಿಮಠ ನೇತೃತ್ವದಲ್ಲಿ ಡಾ. ಹಾನಗಲ್ ಕುಮಾರ ಶಿವಯೋಗಿಗಳ ತೊಟ್ಟಿಲೋತ್ಸವ ಜರುಗಿತು. ಕಾರಣಿಕ ಕುಮಾರಯೋಗಿ, ಸಮಾಜ ವತ್ಸಲ ಕುಮಾರೇಶ್ವರ, ಯುಗಾವತಾರಿ ಹಾಗೂ ಯುಗಪುರುಷ ಹಾನಗಲ್ ಕುಮಾರ ಸ್ವಾಮಿಗಳು ಎಂಬ ನಾಲ್ಕು ಗ್ರಂಥ ಲೋಕಾರ್ಪಣೆಗೊಂಡವು.
ಆಡಿ-ಹಂದಿಗುಂದ ಸಿದ್ದೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಕಾರಂಜಿಮಠದ ಡಾ.ಶಿವಯೋಗಿ ದೇವರು, ಕಮತ್ಯಾನಟ್ಟಿ ಗುರುದೇವರು, ಕರ್ನಾಟಕ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಎಸ್.ಎಸ್.ಕಮಲಾಪುರೆ, ಡಾ.ದಯಾನಂದ ನೂಲಿ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಉಪಾಧ್ಯಕ್ಷ ಸಂಜಯ ಕವಟಗಿಮಠ, ಸಂಗಪ್ಪ ಹಂಪಣ್ಣವರ, ಶಂಕರ ಹಾಗರಗಿ, ಶೇಖರ ಚಿತ್ತವಾಡಗಿ, ಎಸ್.ಎನ್.ಹಿರೇಮಠ, ರವೀಂದ್ರ ಹಂಪಣ್ಣವರ, ಸಂಜಯ ಅರಗೆ, ಸಾಗರ ಬಿಸ್ಕೋಪ್, ಶಾಂಭವಿ ಅಶ್ವತ್ಥಪುರ ಇತರರಿದ್ದರು.