ರಾವೂರಿನಲ್ಲಿ ಮಕ್ಕಳ ಸಂತೆ ನ.9ರಂದು

Ishwar Bali
Published on

ಕಲಬುರಗಿ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸಲು, ಸ್ವಾವಲಂಬಿ ಜೀವನಕ್ಕೆ ಪ್ರೇರಣೆ ನೀಡಲು ಶಹಾಬಾದ್ ತಾಲೂಕಿನ ರಾವೂರದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಿಂದ ನ.೯ರಂದು ಮಕ್ಕಳ ಸಂತೆ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಭಿವೃದ್ಧಿ ಸಂಸ್ಥೆ ಸಹ ಕಾರ್ಯದರ್ಶಿ ಈಶ್ವರ ಬಾಳಿ ತಿಳಿಸಿದರು.

ಮಕ್ಕಳ ದಿನಾಚರಣೆ ನಿಮಿತ್ತ ವಿಭಿನ್ನ ಪ್ರಯೋಗವನ್ನು ರೂಪಿಸಿದ್ದು, ಗ್ರಾಮೀಣ ಭಾಗದ ದೇಸಿ, ಹಳ್ಳಿ ಸಂತೆಯನ್ನು ಸೃಜಿಸಲಾಗುವುದು. ಮಕ್ಕಳು ಸೀರೆ, ದೋತಿ, ಬನಿಯಾನ್ ಸೇರಿ ವಿವಿಧ ಗ್ರಾಮೀಣ ಉಡುಪುಗಳನ್ನು ಧರಿಸಿ, ತರಕಾರಿ, ತಿಂಡಿ ತಿನಿಸು, ಕರಕುಶಲ ವಸ್ತು ಸೇರಿ ವಿವಿಧ ಸಾಮಗ್ರಿ ಮಾರಾಟ ಮಾಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂತೆಯಲ್ಲಿ ಸುಮಾರು ೨೫೦ ವಿದ್ಯಾರ್ಥಿಗಳು ಮಾರಾಟ ಮಾಡಲಿದ್ದಾರೆ. ಸುತ್ತಲಿನ ಗ್ರಾಮಗಳ ಶಾಲೆಗಳ ಮಕ್ಕಳು, ಗ್ರಾಮಸ್ಥರು, ಸಾರ್ವಜನಿಕರು ಗ್ರಾಹಕರಾಗಿ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಸಂತೆ ಪೂರ್ಣಗೊಂಡ ನಂತರ ಅತ್ಯುತ್ತಮ ವ್ಯವಹಾರ ಮಾಡಿದ ೧೦ ವಿದ್ಯಾರ್ಥಿಗಳಿಗೆ ೫೦೦ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂತೆಯನ್ನು ತಹಸೀಲ್ದಾರ್ ಗುರುರಾಜ ಸಂಗಾವಿ ಉದ್ಘಾಟಿಸಲಿದ್ದಾರೆ. ತಾಪಂ ಇಒ ಮಲ್ಲಿನಾಥ ರಾವೂರ, ಬಿಇಒ ಸಿದ್ದವೀರಯ್ಯ ರುದ್ನೂರ ಸೇರಿ ಗಣ್ಯರು, ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಿದ್ದಲಿಂಗ ಬಾಳಿ (೯೫೯೦೦೯೨೧೧೩) ಅವರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ಪ್ರಮುಖರಾದ ಸಿದ್ದಲಿಂಗ ಬಾಳಿ, ಅಣ್ಣಾರಾವ ಬಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net