ರಾವಸಾಹೇಬ ತ್ಯಾಗ ಮನೋಭಾವ ಮಾದರಿ

11BRG1
Published on

ಬೋರಗಾಂವ: ಸಹಕಾರ ರತ್ನ ರಾವಸಾಹೇಬ ಪಾಟೀಲ ಪರಿಶ್ರಮದ ಫಲವಾಗಿ ಅರಿಹಂತ ಗ್ರೂಪ್ ಆಫ್ ಇಂಡಸ್ಟ್ರೀಸ್ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಅವರ ತ್ಯಾಗ ಮನೋಭಾವವು ರಾಜಕೀಯ ಕ್ಷೇತ್ರದಲ್ಲಿ ಶ್ರೇಷ್ಠರನ್ನಾಗಿ ಮಾಡಿತು. ಆದರೆ ಅವರು ಎಂದಿಗೂ ಸ್ವಾರ್ಥ ಬಯಸಲಿಲ್ಲ ಎಂದು ಯುವನಾಯಕ ಉತ್ತಮ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಸಭಾಂಗಣದಲ್ಲಿ ಸಹಕಾರ ರತ್ನ ದಿವಂಗತ ರಾವಸಾಹೇಬ ಪಾಟೀಲ ೮೨ನೇ ಜನ್ಮದಿನ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ವಿನಮ್ರ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾದಾ ಎಲ್ಲರನ್ನು ಅರಿಹಂತ ಕುಟುಂಬದ ಸದಸ್ಯರೆಂದು ಪರಿಗಣಿಸುತ್ತಿದ್ದರು. ಇಂದು ಸಾವಿರಾರು ಯುವಜನರು ಅರಿಹಂತ ಬ್ಯಾಂಕ್, ಪಿಕೆಪಿಎಸ್, ಡೇರಿ ಫಾರ್ಮ್ಗಳು, ಶಾಲೆಗಳು, ಕಾಲೇಜುಗಳು, ನೂಲುವ ಗಿರಣಿಗಳು, ಸಕ್ಕರೆ ಕಾರ್ಖಾನೆಗಳು, ಆಸ್ಪತ್ರೆಗಳ ಮೂಲಕ ಉದ್ಯೋಗಾವಕಾಶ ಪಡೆದಿದ್ದಾರೆ. ಬಡ ರೋಗಿಗಳಿಗೆ ಬೆಳಗಾವಿಯಲ್ಲಿ ಅರಿಹಂತ ಆಸ್ಪತ್ರೆ ಸ್ಥಾಪಿಸಲಾಯಿತು. ಅವರು ನಡೆದ ದಾರಿಯಲ್ಲಿ ನಾವಿಬ್ಬರೂ ಸಹೋದರರು ಮುನ್ನಡೆಯುತ್ತಿದ್ದೇವೆ ಎಂದರು.

ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಇಂದ್ರಜಿತ ಪಾಟೀಲ ಮಾತನಾಡಿ, ಸಹಕಾರಿ ನಾಯಕ ರಾವಸಾಹೇಬ ಪಾಟೀಲ ಜಾತ್ಯತೀತ ಮನೋಭಾವ ನಮಗೆಲ್ಲರಿಗೂ ಆದರ್ಶ ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಪಂಕಜ ಪಾಟೀಲ, ದಾದಾ ಸಾರ್ವಜನಿಕ ಜೀವನ ಎಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದರು.

ವೀರಸೇವಾ ದಳದ ಕೇಂದ್ರ ಸಮಿತಿ ಅಧ್ಯಕ್ಷ ಬಾಳಾಸಾಹೇಬ ಪಾಟೀಲ ಮಾತನಾಡಿ, ದಕ್ಷಿಣ ಭಾರತ ಜೈನ ಸಭಾ, ವೀರಸೇವಾ ದಳ ದಾದಾ ಅವರಿಂದಲೇ ದೇಶದಲ್ಲಿ ಪ್ರಸಿದ್ಧಿ ಪಡೆದವು. ಅವರ ಆದರ್ಶ ಪಾಲಿಸಿದರೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಹಿರಿಯ ಮುಖಂಡರಾದ ಅನಿಲ ಕಲಾಜೆ, ಸುರೇಖಾ ಘಾಳೆ, ಅಭಯಕುಮಾರ ಮಗದುಂ ಮಾತನಾಡಿದರು. ಮಾಜಿ ಶಾಸಕ ಸುಭಾಷ ಜೋಶಿ, ಅಭಿನಂದನ ಪಾಟೀಲ, ಚಂದ್ರಕಾಂತ ಕೋಠಿವಾಲೆ, ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಸುನೀಲ ಮ್ಹಾಕಾಳೆ, ಸುನೀಲ ಪಾಟೀಲ, ನಿರಂಜನ ಪಾಟೀಲ, ಅಭಯಕುಮಾರ ಚೌಗುಲೆ, ಪೀರಗೌಡ ಪಾಟೀಲ, ಪಪ್ಪು ಪಾಟೀಲ, ಸಂಜಯ ಶಿಂತ್ರೆ, ಭರತ ಖೋತ, ಚಿಂತಾಮಣಿ ಪಾಟೀಲ, ಪಿಂಟು ಪಾಟೀಲ, ಕೇದಾರ ಕುಲಕರ್ಣಿ, ಅರಿಹಂತ ಸಂಸ್ಥೆಯ ಉಪಾಧ್ಯಕ್ಷ ಸತೀಶ ಪಾಟೀಲ, ಸಿಇಒ ಅಶೋಕ ಬಂಕಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net