

ಕೊಪ್ಪಳ: ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ ಮೂರು ದಿನಗಳ ಕಾಲ ಸಂಪನ್ನವಾಗಿ ಜರುಗಿತು. ಶನಿವಾರ ಭವ್ಯ ರಥೋತ್ಸವ ಮೂಲಕ ತೆರೆ ಕಂಡಿತು.
ಬೆಳಗ್ಗೆಯಿಂದ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥ ಹಾಗೂ ಪ್ರಸಾದ ಕಾರ್ಯಕ್ರಮ ಜರುಗಿದವು. ಮೊದಲ ಎರಡು ದಿನ ರಾತ್ರಿ ರಥೋತ್ಸವ ಜರುಗಿದರೆ, ಶನಿವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಹೂಗಳಿಂದ ಅಲಂಕಾರಗೊಂಡಿದ್ದ ತೇರು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿ ಸಾಗಿತು. ಭಕ್ತರು ರಾಘವೇಂದ್ರ ಸ್ವಾಮಿ ನಾಮಸ್ಮರಣೆ ಮಾಡಿ ಭಕ್ತಿ ಮೆರೆದರು.
ಸಂಜೆ ಅನನ್ಯಾ ದೇಸಾಯಿ ಭಕ್ತಿ ಸಂಗೀತ, ಸೇವಾ ಪುರಸ್ಕಾರ, ವೆಂಕಟನರಸಿಂಹಾಚಾರ್ಯ ಗುಡೆಬೆಲ್ಲೂರು ಪ್ರವಚನ ಕಾರ್ಯಕ್ರಮ ಮನಸೋರೆಗೊಂಡವರು. ಮಠದ ಮುಂಭಾಗದ ಆಂಜನೇಯ ದೇವರಿಗೂ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.
ಆದಿತ್ಯ ಯಶಸ್ಸಿಗೆ ಪೂಜೆ: ಸೂರ್ಯನ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಶನಿವಾರ ಉಡ್ಡಯನ ಮಾಡಿದ ಆದಿತ್ಯ ಎಲ್-1 ಉಪಗ್ರಹ ಸರಿಯಾಗಿ ಗುರಿ ತಯಲುಪಲಿ ಎಂದು ಪ್ರಾರ್ಥಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಯರ ಆರಾಧನಾ ಮಹೋತ್ಸವದ ಕೊನೆಯ ದಿನದ ಉತ್ತರರಾಧನೆಯ ರಥೋತ್ಸವಕ್ಕೂ ಮೊದಲು ಪೂಜೆ ಸಲ್ಲಿಸಲಾಯಿತು. ಆದಿತ್ಯ ಉಡ್ಡಯನದ ಚಿತ್ರವನ್ನು ರಥದ ಮುಂಭಾಗದಲ್ಲಿ ಇರಿಸಿ ಹೋಮ ಹಾಗೂ ವಿವಿಧ ಪೂಜೆ ಸಲ್ಲಿಸಿ ದೇವರಲ್ಲಿ ಸಂಕಲ್ಪ ಮಾಡಲಾಯಿತು. ಭಕ್ತರು ಇಸ್ರೋ ಉಪಗೃಹ ಚಿತ್ರ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡರು.