

ರಾಯಬಾಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾಗಿ ಮುಖ್ಯ ವೈದ್ಯಾಽಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪರಿಶೀಲಿಸಿ, ಬಾಣಂತಿಯರ ಕೋಣೆಯಲ್ಲಿ ನಳದ ವ್ಯವಸ್ಥೆ ಮತ್ತು ಕಿಟಕಿಗಳಲ್ಲಿ ಧೂಳು ಕಂಡು ಬೇಸರ ವ್ಯಕ್ತಪಡಿಸಿದರು. ಕೋಣೆ ಸ್ವಚ್ಛವಾಗಿಡಲು ಏನು ತೊಂದರೆ ಎಂದು ಪ್ರಶ್ನಿಸಿದರು.
ಆಸ್ಪತ್ರೆ ಮೇಲ್ಛಾವಣಿಯ ನೀರಿನ ಟ್ಯಾಂಕ್‌ಗಳ ಮುಚ್ಚಳ ಇರದಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆ ತೋಡಿಕೊಂಡ ಸಾರ್ವಜನಿಕರು: ಇಲ್ಲಿ ಸರಿಯಾಗಿ ಔಷಧ ಇರೋದಿಲ್ಲ. ಹೊರಗಡೆ ತೆಗೆದುಕೊಳ್ಳರಿ ಎಂದು ಚೀಟಿ ಬರೆದು ಕೊಡುತ್ತಾರೆ. ಡೆಲಿವರಿಗಾಗಿ ಬೆಳಗಾವಿ ಮತ್ತು ಚಿಕ್ಕೋಡಿಗೆ ಕಳುಹಿಸುತ್ತಾರೆ. ಜನರೇಟರ್ ಇದ್ದರೂ ರಾತ್ರಿ ಬೆಳಕಿನ ವ್ಯವಸ್ಥೆ ಇರೋದಿಲ್ಲ. ನರ್ಸ್ಗಳು ಅನುಚಿತವಾಗಿ ವರ್ತಿಸುತ್ತಾರೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವೇತನದಲ್ಲಿ ಮೋಸ: ಡಿ ದರ್ಜೆ ಗುತ್ತಿಗೆದಾರ ನೌಕರರು ತಮಗೆ ಕೇವಲ ತಿಂಗಳಿಗೆ ೬ ಸಾವಿರ ವೇತನ ನೀಡುತ್ತಾರೆ ಎಂದರು.ಈ ಬಗ್ಗೆ ನಾಗಲಕ್ಷ್ಮಿ ಪ್ರಶ್ನಿಸಿದಾಗ, ತಾಲೂಕು ಆರೋಗ್ಯಾಧಿಕಾರಿಯು ೧೮-೧೯ ಸಾವಿರ ವೇತನ ಇದೆ ಎಂದು ಉತ್ತರಿಸಿದರು. ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿದ ನಾಗಲಕ್ಷ್ಮಿ, ಡಿಎಚ್‌ಒ ತಪ್ಪು ಮಾಹಿತಿ ನೀಡಿದ್ದಕ್ಕೆ ಕೆಂಡಾಮಂಡಲಗೊಂಡರು. ಎಲ್ಲರೂ ಏಜೆನ್ಸಿ ಅವರೊಂದಿಗೆ ಕೂಡಿಕೊಂಡು ಗುತ್ತಿಗೆ ನೌಕರರಿಗೆ ಅನ್ಯಾಯ ಮಾಡುತ್ತಿದ್ದೀರಿ. ಅವರಿಗೆ ಎಲ್ಲ ವೇತನ ಕೊಡಬೇಕೆಂದು ತಾಕೀತು ಮಾಡಿದರು. ಜತೆಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಂ.ಪಾಟೀಲ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ಆಯುಷ್ ವೈದ್ಯಾಧಿಕಾರಿ ಡಾ.ಆರತಿ ಚಿನಕೊಟಿ, ವೈದ್ಯರಾದ ಡಾ.ಸದಾಶಿವ ಖನದಾಳೆ, ಡಾ.ಸಿದ್ದಾರ್ಥ ಮಗದುಮ್ಮ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ, ನಂದಕುಮಾರ ಪಾಟೀಲ, ಶ್ರೀಶೈಲ ಶಿರೂರ ಹಾಗೂ ಸಿಬ್ಬಂದಿ ಇದ್ದರು.