

ಕನಕಗಿರಿ (ಕೊಪ್ಪಳ):ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ ಯುವಕರಿಗೆ ಮಾದರಿಯಾಗಬೇಕಿದೆ ಎಂದು ಕರಡೋಣ ಗ್ರಾಪಂ ಅಧ್ಯಕ್ಷ ಹಿರೇ ಹನುಮಂತಪ್ಪ ಮಂದಲಾರ ಹೇಳಿದರು.
ಮಂಗಳವಾರದಂದು ತಾಲೂಕಿನ ಕೆ.ಮಲ್ಲಾಪೂರ ಗ್ರಾಮದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ರಾಯಣ್ಣನ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಅಪ್ರತಿಮ ದೇಶಭಕ್ತನಾಗಿದ್ದ ರಾಯಣ್ಣ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಯುವ ಸಮೂಹಕ್ಕೆ ಪ್ರೇರಣೆಯಾಗಿದೆ. ಇವರ ಕುಟುಂಬವು ಶೌರ್ಯ ಹಾಗೂ ಸಾಹಸಕ್ಕೆ ಹೆಸರಾಗಿತ್ತು. ಅಂತಹ ಮನೆತನದಲ್ಲಿ ಜನಿಸಿದ ರಾಯಣ್ಣ, ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಛಲ ತೊಟ್ಟಿದ್ದನ್ನಲ್ಲದೇ, ರಾಣಿ ಚನ್ನಮ್ಮಳ ಬಲಗೈ ಬಂಟನಾಗಿ ಹೋರಾಟ ನಡೆಸಿದನು. ಬ್ರಿಟೀಷರು ರಾಯಣ್ಣನಿಗೆ ಗಲ್ಲು ಶಿಕ್ಷೆ ವಿಧಿಸಿದಾಗಲೂ ಕಿಂಚಿತ್ತು ಹೆದರದೇ ನಗುನಗುತ್ತಲೇ ಕುಣಿಕೆಗೆ ಕೊರಳೊಡ್ಡಿ ಮಹನೀಯನಾಗಿದ್ದಾನೆ. ಇಂತಹ ಮಹನೀಯನ ರಾಷ್ಟ್ರಪ್ರೇಮ ಈಗಿನ ಯುವಕರು ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದರು.
ಶಿಕ್ಷಕ ಸಿದ್ದಲಿಂಗಪ್ಪ ಗದ್ದಿ ರಾಯಣ್ಣ ಹೋರಾಟ, ದೇಶಪ್ರೇಮದ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ಗ್ರಾಮದ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಭಾವಚಿತ್ರ ಮೆರವಣಿಗೆ ನಾನಾ ಬೀದಿಗಳಲ್ಲಿ ಮಹಿಳೆಯರ ಕಳಸ, ಕುಂಭಗಳೊಂದಿಗೆ ಸಂಚರಿಸುವ ಮೂಲಕ ರಾಯಣ್ಣ ವೃತ್ತದವರೆಗೆ ನಡೆಯಿತು. ಹಾಲುಮತ ಸಮಾಜದ ಯುವಕರಿಂದ ಡೊಳ್ಳು ಕುಣಿತ ಮೆರವಣಿಗೆಗೆ ಶೋಭೆ ನೀಡಿತು.
ತಾ.ಪಂ ಮಾಜಿ ಸದಸ್ಯ ಜುಮ್ಮಣ್ಣ, ಪ್ರಮುಖರಾದ ರಾಮನಗೌಡ ಬುನ್ನಟ್ಟಿ, ನಾಗರಾಜ ಹಾಲುಮತ, ಮಲ್ಲಪ್ಪ ಪೊನ್ನಾಪುರ, ಬೀರಪ್ಪ, ದುರುಗಪ್ಪ, ಗಿರಿಯಪ್ಪ ಇತರರಿದ್ದರು.