

ಶನಿವಾರಸಂತೆ: ಸಮಿಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಕೂಜಗೇರಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು.
ಸೋಮವಾರ ಸಂಜೆ 7 ಗಂಟೆ ವೇಳೆಗೆ ದೇವಸ್ಥಾನದಲ್ಲಿ ಕದಳಿ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯ ನೆರವೇರಿಸಲಾಯಿತು. ಗ್ರಾಮದ ಪ್ರತಿ ಮನೆಯಿಂದ ಮಹಿಳೆಯರು ತಂದ ಕುಂಭ ಕಳಸವನ್ನು ದೇವಸ್ಥಾನದೊಳಗೆ ಇಟ್ಟ ಬಳಿಕ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರು ಈಡುಗಾಯಿ ಒಡೆದರು. ನಂತರ ಮಹಾ ಮಂಗಳಾರತಿ ಮಾಡಲಾಯಿತು.
ಪೂಜಾ ಮಹೋತ್ಸವದಲ್ಲಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಬಿ.ದಿವ್ಯೇಶ್, ಪ್ರಮುಖರಾದ ಪ್ರಸನ್ನ, ನಿಖಿಲ್, ಕಿಶನ್, ಕೆ.ಟಿ.ಹರೀಶ್, ಪವನ್, ಪುನಿತ್, ವಿನಯ್, ವಿಜಯ್, ಜಗದೀಶ್, ರಾಜಪ್ಪ, ದೀಕ್ಷೀತ್, ರಾಮು, ಪ್ರಜ್ವಲ್, ರವಿ, ಚಿಂತನ್, ಚಂದನ್ ಹಾಜರಿದ್ದರು.