ರಾಮಾಯಣದ ನೀತಿಗಳನ್ನು ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಸಿ. ಸತ್ಯಭಾಮಾ

ರಾಮಾಯಣದ ನೀತಿಗಳನ್ನು ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಸಿ. ಸತ್ಯಭಾಮಾ
Published on

ಹಾಸನ: ಮಹರ್ಷಿ ವಾಲ್ಮೀಕಿ ಅವರು ಲಿಖಿತ ರೂಪದಲ್ಲಿ ನೀಡಿರುವ ಶ್ರೇಷ್ಠ ಗ್ರಂಥ ರಾಮಾಯಣದಲ್ಲಿ ಬರುವ ಪಿತೃವಾಕ್ಯ ಪರಿಪಾಲಕ ಶ್ರೀ ರಾಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಹಯೋಗದಲ್ಲಿ ಶನಿವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಮಾಯಣ ಗ್ರಂಥದಲ್ಲಿರುವ ನೀತಿ, ಮಾರ್ಗಗಳನ್ನು ಪಾಲಿಸಬೇಕು. ಸಹೋದರತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹೆಣ್ಣು, ಹೊನ್ನು, ಮಣ್ಣಿನ ವ್ಯಾಮೋಹ ತೊರೆಯಬೇಕು. ರಾವಣ ಸೀತೆಯ ವ್ಯಾಮೋಹಕ್ಕೆ ಒಳಗಾಗಿ ದುಷ್ಟನಾದ, ಶ್ರೀರಾಮ ಪಿತೃವಾಕ್ಯ ಪರಿಪಾಲನೆ ಮಾಡಿ ದೇವರಾದ. ಆದ್ದರಿಂದ ರಾಮನಾಗಬೇಕೋ ಅಥವಾ ರಾವಣನಾಗಬೇಕೋ ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. ರಾಮಾಯಣದಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಅಂಶಗಳಿದ್ದು. ನಮಗೆ ಯಾವುದನ್ನು ಬೇಕೋ ಅದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಬದುಕಲು ಬೇಕಾದ ಎಲ್ಲಾ ಅಂಶಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ಪಾಲನೆ ಮಾಡುವ ಮೂಲಕ ಸಾರ್ಥಕದ ಜೀವನ ಸಾಗಿಸಬಹುದು. ವಾಲ್ಮೀಕಿ ರಾಮಾಯಣ ಹೊರತುಪಡಿಸಿ ಹಲವರು ರಾಮಾಯಣ ರಚನೆ ಮಾಡಿದ್ದಾರೆ. ಆದರೆ, ವಾಲ್ಮೀಕಿ ರಾಮಾಯಣದಲ್ಲಿ ತಿಳಿದುಕೊಳ್ಳಬೇಕಾದದ್ದು ಸಾಕಷ್ಟಿದೆ. ಎಲ್ಲಾ ಕಾಲಕ್ಕೂ ಅದೇ ಸೂರ್ಯ, ಚಂದ್ರರಿದ್ದಾರೆ. ನಮ್ಮ ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅಸೂಹೆ, ಅಹಂಕಾರ, ವೈರತ್ವಗಳನ್ನು ಬಿಟ್ಟು ಭಕ್ತಿ ಭಾವ, ಶ್ರೇಷ್ಠತೆಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ವಾಲ್ಮೀಕಿ ಸಮುದಾಯದ ಸಾಧಕರರನ್ನು ಸನ್ಮಾನಿಸಲಾಯಿತು. ಅದೇ ರೀತಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಲಕ್ಷ್ಮೀಗೌಡ, ಸ್ವಾತಂತ್ರ್ಯ ಹೊರಾಟಗಾರ ಎಚ್.ಎಂ.ಶಿವಣ್ಣ, ಸಮುದಾಯದ ಮುಖಂಡ ಶೇಖರಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾವಚಿತ್ರ ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ವಿವಿಧ ಕಲಾ ತಂಡಗಳೊಂದಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತದ ಮೂಲಕ ಕಲಾಭವನಕ್ಕೆ ಕರೆ ತರಲಾಯಿತು. ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net