

ಮೈಸೂರು: ಆಸ್ತಿಕರು-ನಾಸ್ತಿಕರು ಸೇರಿದಂತೆ ಎಲ್ಲ ವರ್ಗದ ವಿದ್ವಾಂಸರು ರಾಮಾಯಣ ಗ್ರಂಥವನ್ನು ರಚಿಸಿದ್ದು, ಸಾವಿರಾರು ವರ್ಷ ಕಳೆದರೂ ರಾಮಾಯಣಕ್ಕೆ ಎಂದಿಗೂ ಸಾವಿಲ್ಲ ಎಂದು ಖ್ಯಾತ ಪ್ರವಚನಕಾರ ಡಾ.ಪಾವಗಡ ಪ್ರಕಾಶ್‌ರಾವ್ ಅಭಿಪ್ರಾಯಪಟ್ಟರು.
ದತ್ತಸೇನೆಯಿಂದ ನಗರದ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ಪ್ರವಚನ ಮಾಲಿಕೆಯ ಸಮಾರೋಪದಲ್ಲಿ ಮಾತನಾಡಿದರು.
ರಾಮಾಯಣದಲ್ಲಿ 21 ಸಾವಿರ ಶ್ಲೋಕಗಳಿದ್ದು, ಶತಶತಮಾನದಿಂದ ಭಾರತೀಯರ ಬಾಯಲ್ಲಿ ಬೆಳೆದು ಬಂದಿದೆ. ಆಸ್ತಿಕರು-ನಾಸ್ತಿಕರು ಸೇರಿದಂತೆ ಎಲ್ಲ ವರ್ಗದ ವಿದ್ವಾಂಸರು ರಾಮಾಯಣ ಗ್ರಂಥವನ್ನು ರಚಿಸುವ ಜತೆಗೆ ಅನುವಾದಿಸಿದ್ದಾರೆ. ಇದರೊಂದಿಗೆ ವಿಮರ್ಶೆಯನ್ನೂ ಮಾಡಲಾಗಿದ್ದು, ಬಹುತೇಕ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ರಚಿತವಾಗಿವೆ. ಈ ಎಲ್ಲ ಗ್ರಂಥಗಳನ್ನು ಒಂದೆಡೆ ಕಲೆ ಹಾಕಿದರೆ ಗುಡ್ಡ ಆಗಲಿದೆ ಎಂದರು.
ಭಗವದ್ಗೀತೆಯಲ್ಲಿ ಬರುವ ಶ್ರೀಕೃಷ್ಣ ಪರಮಾತ್ಮ ಶಾಂತ ಸ್ವರೂಪಿಯಾಗಿ ಕಾಣಿಸಿಕೊಂಡಿದ್ದಾರೆ. ದ್ರೋಣಾಚಾರ್ಯರನ್ನು ವಧಿಸುವ ಸಂದರ್ಭದಲ್ಲಿ ಮಾತ್ರ ಶ್ರೀಚಕ್ರವನ್ನು ಪ್ರಯೋಗಿಸುತ್ತಾನೆ. ಉಳಿದಂತೆ ಮಹಾಭಾರತದಲ್ಲಿ ಹೆಚ್ಚು ಶಸ್ತ್ರವನ್ನು ಉಪಯೋಗಿಸದೆ ಶಾಂತ ಸ್ವರೂಪವಾಗಿಯೇ ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಅವಧೂತ ಪರಂಪರೆ ಎಂದರೆ ಲೋಕದ ವ್ಯಾಮೋಹದಿಂದ ದೂರವಿದ್ದು, ಭಗವಂತನ ಸ್ಮರಣೆಯಲ್ಲಿ ಬದುಕುವುದು ಎಂದರ್ಥ. ದತ್ತಾತ್ರೇಯ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ತ್ರಯರ ದೈವಾಂಶವುಳ್ಳವರು. ಹಲವು ವರ್ಷಗಳಿಂದ ದತ್ತಾತ್ರೇಯನ ಸೇವೆ ಮಾಡುತ್ತ, ಅಧ್ಯಾತ್ಮ ಕ್ಷೇತ್ರದ ಮೇರುಪರ್ವತವಾಗಿ ಹೊರಹೊಮ್ಮಿರುವ ಗಣಪತಿ ಶ್ರೀಗಳು, ಶಾಂತ ಸ್ವರೂಪಿಗಳಾಗಿ ನಿತ್ಯ ಹಲವು ಭಕ್ತರ ನೋವು-ನಲಿವಿಗೆ ಸ್ಪಂದಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ಅವಧೂತ ದತ್ತ ಪೀಠದ ಶ್ರೀದತ್ತ ವಿಜಯಾನಂದತೀರ್ಥ ಸ್ವಾಮೀಜಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಉದ್ಯಮಿ ರವಿಶಾಸ್ತ್ರಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕೆ.ರಘುರಾಮ್ ವಾಜಪೇಯಿ, ದತ್ತ ಸೇನೆಯ ಕೆ.ಆರ್.ಸತ್ಯನಾರಾಯಣ, ಧಾರ್ಮಿಕ ಮುಖಂಡ ಭಾನುಪ್ರಕಾಶ್ ಇತರರು ಇದ್ದರು.