

ಮೈಸೂರು: ಯಾರು ಎಷ್ಟೇ ಬರೆದರೂ ಮಹಾಗ್ರಂಥವಾಗಿರುವ ರಾಮಾಯಣ ಪ್ರವಹಿಸುವ ಗಂಗೆಯಂತೆ ಎಂದು ವಿದ್ವಾನ್ ಕೃ. ರಾಮಚಂದ್ರ ಅಭಿಪ್ರಾಯಪಟ್ಟರು.
ಮೈಸೂರು ದಾಸೋಹ ಮತ್ತು ಜೆ.ಎಲ್.ಎಸ್ ಪ್ರಕಾಶನದಿಂದ ನಗರದ ನೇಗಿಲಯೋಗಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 92ನೇ ಸಾಹಿತ್ಯ ದಾಸೋಹ ಹಾಗೂ ಬಿ.ಪಿ. ಅಶ್ವತ್ಥನಾರಾಯಣ ಅವರು ಬರೆದಿರುವ ‘ರಸರಾಮಾಯಣ, ಒಂದು ರಸ ಸ್ಪಂದನೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಮಾಯಣವನ್ನು ಅನೇಕರು ಬರೆದಿದ್ದಾರೆ. ಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾ ಛಂದಸ್ಸಿನಲ್ಲಿ ಅದು ನಡೆದ ಹಾದಿಯೇ ಬೇರೆ, ಅದರಂತೆ ಗಜಾನನ ಈಶ್ವರ ಹೆಗಡೆ ತಮ್ಮದೇ ಆದ ಶೈಲಿಯಲ್ಲಿ ಸಹ ರಾಮಾಯಣವನ್ನು ಕಟ್ಟಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ರಸಕ್ಕೆ ಒತ್ತು ನೀಡಿದ್ದಾರೆ. ತನ್ನ ಕಾವ್ಯವನ್ನು ಹೆಣ್ಣಿಗೆ ಹೋಲಿಕೆ ಮಾಡಿದ್ದಾರೆ. ರಸ ರಾಮಾಯಣವನ್ನೇ ಸೃಷ್ಠಿ ಮಾಡಿಕೊಟ್ಟಿದ್ದಾರೆ. ಇಲ್ಲಿ ಕಥೆ ಪ್ರಾಧಾನ್ಯವಲ್ಲ. ಪಾತ್ರಗಳನ್ನು ಅಲ್ಲಲ್ಲಿ ಮುಕ್ತಕ ಛಂದಸ್ಸಿನಲ್ಲಿ ಬರೆದು ರಸಕ್ಕೆ ಪ್ರಾಧಾನ್ಯ ನೀಡಿದ್ದಾರೆ. ಕಾವ್ಯದ ಜೀವ ರಸವಾಗಬೇಕು ಎಂದು ಹೇಳಿದರು.
ಕೃತಿಯಲ್ಲಿ ರಾಮಾಯಣದ 7 ಕಾಂಡಗಳ ಬಗ್ಗೆ ಬರೆದಿದ್ದಾರೆ. ಕೃತಿಯಲ್ಲಿರುವ ತಾಯಿತನ ಎಂಬ ಶೀರ್ಷಿಕೆಯಲ್ಲಿ ರಾಮಾಯಣದಲ್ಲಿ ಬರುವ ಆಸ್ಥಾನದ ಸೇವಕಿ ಮಂಥರೆ ಬಗ್ಗೆ ಹೇಳುತ್ತದೆ. ಇದರಿಂದ ಸ್ಪೂರ್ತಿಗೊಂಡು ಇನ್ನುಳಿದ ಕಾಂಡಗಳನ್ನು ಬರೆಯಲಿ ಎಂದು ಹಾರೈಸಿದರು.
ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕಿ ಡಾ. ಪ್ರಸನ್ನಾಕ್ಷಿ ಮಾತನಾಡಿ, ಈ ಕೃತಿಯಲ್ಲಿ ಬಿ.ಪಿ ಅಶ್ವತ್ಥನಾರಾಯಣ ಅವರ ಪಾಂಡಿತ್ಯ ಎಂತದ್ದು ಎಂದು ತಿಳಿಯುತ್ತದೆ. ರಾಮಾಯಣ ಕಾಂಡವನ್ನು ಅಸ್ವಾದಿಸುವುದೇ ಈ ಕೃತಿಯ ಉದ್ದೇಶ. ರಸ ರಾಮಾಯಣ ನಾನು ಅಸ್ವಾದಿಸಿದ್ದೇನೆ. ಅವರಲ್ಲಿವರು ಅಧ್ಯಯನದ ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು ಎಂದರು.
ಸಾಹಿತಿಗಳಾದ ಬಿ.ಪಿ.ಅಶ್ವತ್ಥನಾರಾಯಣ, ಗಜಾನನ ಈಶ್ವರ ಹೆಗಡೆ, ಎಂ.ಆರ್. ಆನಂದ್, ಪದ್ಮ ಆನಂದ್ ಇದ್ದರು.