ರಾಮಾಯಣ ಕಾಲಘಟ್ಟದ ಗ್ರಾಮ ಅವನಿ

Shasana
Published on

ಮುಳಬಾಗಿಲು: ತಾಲೂಕಿನ ಅವನಿ ರಾಮಾಯಣ ಕಾಲಘಟ್ಟದಿಂದ ಗ್ರಾಮವಾಗಿದ್ದು, ಪೌರಾಣಿಕ, ಧಾರ್ಮಿಕ, ಐತಿಹಾಸಿಕವಾಗಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಇಲ್ಲಿರುವ ದೇವಾಲಯದಲ್ಲಿ ಶ್ರೀ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರಘ್ನೇಶ್ವರ ವಿಗ್ರಹಗಳಿದ್ದು, ಇಲ್ಲಿ ವಿಭೀಷಣ ದೇವಾಲಯವಿತ್ತೆಂಬ ವಿಚಾರ ತಮಿಳು ಶಾಸನವೊಂದರಿಂದ ತಿಳಿದು ಬಂದಿದೆ.

ಮೂರು ವರ್ಷಗಳ ಹಿಂದೆ ಅವನಿಯ ಹೊರವಲಯದಲ್ಲಿನ ಅಂತರಗಂಗೆಯಲ್ಲಿ ಸಿಕ್ಕಿದ್ದ ಶಾಸನವನ್ನು ಅಧ್ಯಯನ ಮತ್ತು ವಿಶ್ಲೇಷಣೆಗೊಳಪಡಿಸಿದ ಇತಿಹಾಸಕಾರರು ಗ್ರಾಮದ ಐತಿಹ್ಯದ ಮಾಹಿತಿ ಒದಗಿಸಿದ್ದಾರೆ. ಈಗಾಗಲೇ ಸುತ್ತಮುತ್ತಲಿನ ಪ್ರದೇಶದಲ್ಲಿ 30ಕ್ಕೂ ಹೆಚ್ಚು ತಮಿಳು ಶಾಸನಗಳು ಸಿಕ್ಕಿದ್ದು, ಅವು ಸಹ ಮಹತ್ವದ ಶಾಸನಗಳಾಗಿವೆ.

ಶಾಸನ ಶೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇತಿಹಾಸ ತಜ್ಞ ಡಾ.ಕೆ.ಆರ್​.ನರಸಿಂಹನ್​, ಡಾ.ಅರಿವು ಶಿವಪ್ಪ, ಕೆ.ಧನಪಾಲ್​ ಅವರಿಗೆ ಉಪನ್ಯಾಸಕ ಗೋಪಿ, ತಮಿಳುನಾಡು ಕೃಷ್ಣಗಿರಿಯ ಸಂಶೋಧಕ ಗೋವಿಂದರಾಜನ್​ ಶಾಸನ ಓದಿಗೆ ನೆರವಾಗಿದ್ದಾರೆ.

ಅವನಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ದೇವಾಲಯ ಐತಿಹಾಸಿಕ ಪ್ರವಾಸಿ ಕ್ಷೇತ್ರವಾಗಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳ ದಿವ್ಯ ರ್ನಿಲಕ್ಷಕ್ಕೆ ಒಳಗಾಗಿ ಅಭಿವೃದ್ಧಿ ಕಾಣದಿರುವುದು ವಿಪರ್ಯಾಸ. ಇಂತಹ ಪುಣ್ಯಕ್ಷೇತ್ರಗಳು ಬೇರೆ ರಾಜ್ಯಗಳಲ್ಲಿ ಇದ್ದಿದ್ದರೆ ಅಭಿವೃದ್ಧಿಗೊಂಡು ಪ್ರಸಿದ್ಧ ಪ್ರವಾಸಿ ತಾಣವಾಗಿ ಬೊಕ್ಕಸಕ್ಕೆ ಆದಾಯ ತಂಡುಕೊಡುದ್ದವು. ಈಗಲಾದರೂ ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ದೇಗುಲದ ಪ್ರಗತಿಗೆ ಮುಂದಾಗಬೇಕಿದೆ ಎಂಬುದು ಸ್ಥಳಿಯರ ಒತ್ತಾಯವಾಗಿದೆ.

ಅಂತರಗಂಗೆಯಲ್ಲಿ ದೊರೆತ ಶಾಸನದಲ್ಲಿ 14 ಸಾಲುಗಳಿವೆ. ರಾಜನ ಹೆಸರು ಇಲ್ಲದಿದ್ದರೂ ಆಂತರಿಕ ಕಾರಣಗಳಿಂದಾಗಿ ಕುಲೋತ್ತುಂಗನೆಂಬ ಚೋಳರಾಜನ ಕಾಲಕ್ಕೆ ಸೇರಿಸಬಹುದು. ಇದು 1090ರ ಆದಿಗೆ ಸೇರಲಿದೆ. ಇದೊಂದು ದಾನ ಶಾಸನವಾಗಿದ್ದು, ವಿಭೀಷಣೇಶ್ವರ ದೇವರ ಮುಂದೆ ಬೆಳಗಬೇಕಾದ ನಂದಾದೀಪಗಳಿಗಾಗಿ 27 ಹಸುಗಳನ್ನು ಮೂವರು ಬ್ರಾಹ್ಮಣರಿಗೆ ನೀಡಿರುತ್ತಾರೆ. ನರಿಯರೂರಿನ ಕುವಲಯ ಸುಂದರನ್​, ಸೂರ್ಯನ್​ ಚಕ್ರಪಾಣಿ ಮತ್ತು ವಿಕ್ರಮಚೋಳ ಮೂವೆಂಡವೇಲನ್​ ಎನ್ನುವವರು ದಾನ ನೀಡಿದ ಬಗ್ಗೆ ಮಾಹಿತಿ ಇದೆ.

> ಡಾ.ಕೆ.ಆರ್​.ನರಸಿಂಹನ್​

ಶಾಸನ ಸಂಶೋಧಕ, ನಿವೃತ್ತ ಜಂಟಿ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ

ಮೂರು ವರ್ಷಗಳ ಹಿಂದೆ ಕೋಲಾರದ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಅವನಿ ದೇವಾಲಯ ಪರಿಸರದ ಅಂತರಗಂಗೆಯಲ್ಲಿ ಸ್ವಚ್ಛತೆ ಮಾಡುವಾಗ ಈ ತಮಿಳು ಶಾಸನ ಪತ್ತೆಯಾಯಿತು. ಹಲವು ಶಾಸನಗಳು ದೇವಾಲಯದ ಅಡಿಪಾಯದ ಕಲ್ಲುಗಳಲ್ಲಿ ಕಂಡು ಬಂದಿವೆ. ಹಲವು ಶಾಸನಗಳು ಮಣ್ಣಿನಲ್ಲಿ ಹೂತು ಹೋಗಿವೆ. ಇವುಗಳ ಬಗ್ಗೆ ಅರಿವು ಮೂಡಿಸಿ, ಶಾಸನಗಳನ್ನು ಸಂರಕ್ಷಣೆ ಮಾಡಬೇಕಿದೆ.

> ಡಾ.ಜಿ.ಶಿವಪ್ಪ ಅರಿವು

ಇತಿಹಾಸತಜ್ಞ, ಉಪನ್ಯಾಸಕ ಸರ್ಕಾರಿ ಮಹಿಳಾ ಕಾಲೇಜು ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net