

ಕುಶಾಲನಗರ: ಕುಶಾಲನಗರ ಸಮೀಪದ ರಾಮಸ್ವಾಮಿ ಕಣಿವೆ ಗ್ರಾಮ, ದಕ್ಷಿಣಕಾಶಿ ಎಂದೇ ಖ್ಯಾತಿ ಪಡೆದಿರುವ, ಕಾವೇರಿ ನದಿ ದಂಡೆಯಲ್ಲಿನ ಶ್ರೀ ರಾಮಲಿಂಗೇಶ್ವರ ದೇಗುದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವ ಗುರುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಶ್ರೀ ರಾಮನವಮಿ ಅಂಗವಾಗಿ ಜರುಗುವ ರಥೋತ್ಸವ ಹಿನ್ನೆಲೆಯಲ್ಲಿ ಕಣಿವೆ, ಹುಲುಸೆ ಹಾಗೂ ಹಕ್ಕೆ ಗ್ರಾಮಗಳ ಪ್ರತಿ ಮನೆಗಳ ಮುಂದೆ ಭಕ್ತ ಜನರು ತಳಿರು-ತೋರಣ, ರಂಗೋಲಿಯಿಂದ ಸಿಂಗರಿಸಿದ್ದರು.
ಬೆಳಗ್ಗೆಯಿಂದಲೇ ದೇವಾಲಯದ ಗರ್ಭಗುಡಿಯಲ್ಲಿನ ಶ್ರೀ ರಾಮಲಿಂಗೇಶ್ವರ ಲಿಂಗಕ್ಕೆ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ, ಬಗೆಬಗೆಯ ಪುಷ್ಪಗಳಿಂದ ಅಲಂಕೃತಗೊಳಿಸಿ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ರಥೋತ್ಸವದಲ್ಲಿ ಪ್ರತಿಷ್ಠಾಪಿಸುವ ಶ್ರೀ ರಾಮನ ಉತ್ಸವಮೂರ್ತಿಗೆ ಕೇಸರಿ ಪೇಟ ತೊಡಿಸಲಾಗಿತ್ತು.
ನೆರೆಯ ಹೆಬ್ಬಾಲೆ ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ಕಾಶಿಯಿಂದ ಅಂಚೆಯಲ್ಲಿ ಬರುವ ಪವಿತ್ರ ಗಂಗಾ ಜಲವನ್ನು ಅಲಂಕೃತ ತೆರೆದ ವಾಹನದಲ್ಲಿ ಹೆಬ್ಬಾಲೆ ದೇವಾಲಯ ಸಮಿತಿಯವರು ಮೆರವಣಿಗೆಯಲ್ಲಿ ತಂದಾಗ, ಹಕ್ಕೆ ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಾಲಯ ಸಮಿತಿ ಪದಾಧಿಕಾರಿಗಳು ಅಧ್ಯಕ್ಷ ಕೆ.ಎನ್.ಸುರೇಶ್ ನೇತೃತ್ವದಲ್ಲಿ ಬರಮಾಡಿಕೊಂಡರು. ವೀರಭದ್ರ ನೃತ್ಯ ಹಾಗೂ ಚಂಡೆವಾದ್ಯದೊಂದಿಗೆ ಮುಖ್ಯ ರಸ್ತೆಯ ಮೂಲಕ ದೇವಾಲಯದ ಸನ್ನಿಧಿಗೆ ತರಲಾಯಿತು.
ಬಳಿಕ ಅಲಂಕೃತ ಶ್ರೀ ರಾಮಲಿಂಗೇಶ್ವರಲಿಂಗ ಹಾಗೂ ರಾಮನ ಉತ್ಸವಮೂರ್ತಿಗೆ ಗಂಗೋಧಕ ಪ್ರೋಕ್ಷಣೆ ಮಾಡಲಾಯಿತು. ನಂತರ ಅಲಂಕೃತ ರಥದಲ್ಲಿ ರಾಮನ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಧಿ ವಿಧಾನಗಳ ನಡೆಸಲಾಯಿತು. ನಂತರ ರಥೋತ್ಸವಕ್ಕೆ ಚಾಲನೆ ದೊರೆಯಿತು. ಸಹಸ್ರಾರು ಸಂಖ್ಯೆಯ ಭಕ್ತರು ದೇಗುಲ ಆವರಣದಿಂದ ತೇರನ್ನು ಕಣಿವೆ ಗ್ರಾಮದಲ್ಲಿನ ಅರಳಿ ಮರದವರೆಗೆ ರಥವನ್ನು ಎಳೆದರು. ಸಂಜೆ ವೇಳೆ ಸುರಕ್ಷಿತವಾಗಿ ರಥ ಸ್ವಸ್ಥಾನಕ್ಕೆ ಮರಳಿತು. ರಥದ ಮೇಲೆ ಹಣ್ಣು-ದವನಗಳನ್ನು ಎಸೆದು ಪುನೀತರಾದರು.
ಬೆಂಗಳೂರು ಮೂಲದ ನರಹರಿ ಭಟ್ ನೇತೃತ್ವದ ಅರ್ಚಕರ ತಂಡದಿಂದ ಧಾರ್ಮಿಕ ಕೈಂಕರ್ಯ ನೆರವೇರಿದವು. ರಥೋತ್ಸವದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಬಹುತೇಕ ಮನೆಗಳ ಮುಂದೆ ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು.