

ಮೈಸೂರು: ರಾಮಮಂದಿರ ನಿರ್ಮಾಣವಾದರೆ ಸಾಲದು, ರಾಮರಾಜ್ಯ ನಿರ್ಮಾಣದ ಕನಸು ನನಸಾಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಚಾತುರ್ಮಾಸ್ಯ ವ್ರತ ಆಚರಣೆ ಕೈಗೊಂಡಿರುವ ಅವರು ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಮುಂಬರುವ ಮಕರ ಸಂಕ್ರಾಂತಿ ಬಳಿಕ ಪ್ರತಿಷ್ಠಾಪನೆಗೊಳ್ಳಲಿದೆ. ಪ್ರಧಾನಿ ನರೇಂದ್ರಮೋದಿ ಅವರು ಕಾರ್ಯಕ್ರಮ ಹೊಂದಾಣಿಕೆ ಮಾಡಿಕೊಂಡ ನಂತರ ದಿನಾಂಕ ಘೋಷಣೆಯಾಗಲಿದೆ ಎಂದು ತಿಳಿಸಿದರು.
ಸುಮ್ಮನೆ ಕೂರುವಂತಿಲ್ಲ:
ರಾಮಮಂದಿರ ಉದ್ಘಾಟನೆ ಆದ ಬಳಿಕ ನಮ್ಮ ಕೆಲಸ ಮುಗಿಯಿತೆಂದು ಸುಮ್ಮನೆ ಕೂರಲು ಆಗದು. ಮುಂದೆ ರಾಮರಾಜ್ಯ ಸ್ಥಾಪನೆಯ ಕನಸು ನನಸು ಮಾಡಬೇಕು. ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು. ಜತೆಗೆ, ರಾಮನ ಗುಣಗಳಲ್ಲಿ ಎಲ್ಲರೂ ಒಂದೊಂದು ಗುಣ ಅಳವಡಿಸಿಕೊಂಡರೆ ರಾಮರಾಜ್ಯ ಕಲ್ಪನೆ ನನಸಾಗಲಿದೆ ಎಂದು ಹೇಳಿದರು.
ರಾಮಭಕ್ತಿ ಬೇರೆ ಅಲ್ಲ, ದೇಶಭಕ್ತಿ ಬೇರೆ ಅಲ್ಲ. ಅಸಹಾಯಕರು, ಬಡವರು, ಕಷ್ಟದಲ್ಲಿ ಇರುವವರಿಗೆ ಅವರವರ ವೃತ್ತಿ ಸೀಮೆಯಲ್ಲಿ ನೆರವಾಗುವುದೇ ರಾಮಸೇವೆ. ಅದು ದೇಶಸೇವೆಯೂ ಹೌದು ಎಂದು ಬಣ್ಣಿಸಿದರು.
ಹಿಂಸೆಯ ವೈಭವೀಕರಣ ಸಲ್ಲ:
ಸಮಾಜದಲ್ಲಿ ಅನೇಕ ಬಗೆಯ ಗೊಂದಲಗಳು ಸೃಷ್ಟಿಯಾಗಿದ್ದು, ಹಿಂಸೆಯ ವೈಭವೀಕರಣವಾಗುತ್ತಿದೆ. ವಿದೇಶಗಳಲ್ಲಿ ಅಪರಾಧ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ. ಕಾನೂನಿನ ಮೇಲೆ ಭಯವೇ ಇಲ್ಲವಾಗಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಥವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿವೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಮೂರು ರಂಗಗಳು ಸಮರ್ಥವಾಗಿ ಕಾರ್ಯನಿರ್ವಹಿಸುವ ಮೂಲಕ ಜನರ ವಿಶ್ವಾಸ ಗಳಿಸಬೇಕು. ಪತ್ರಿಕಾರಂಗ ಸಮಾಜ ಕಟ್ಟುವ, ಸಾಮರಸ್ಯ ಗಟ್ಟಿಗೊಳಿಸುವ ಕೆಲಸ ಮಾಡುವ ಮೂಲಕ ಮಾದರಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಶ್ರೀಮಠದಿಂದ ವಸತಿ ಯೋಜನೆ:
ಪೇಜಾವರ ಮಠದಿಂದ ವಸತಿ ರಹಿತರಿಗೆ ಮನೆ ನೀಡಲು ಮುಂದಾಗಿದ್ದು, ಈಗಾಗಲೇ ಉಡುಪಿಯಲ್ಲಿ 8 ಮನೆ ನಿರ್ಮಾಣವಾಗಿವೆ. ಮೈಸೂರಿನಲ್ಲೂ ಇಬ್ಬರು ದಾನಿಗಳು ಮನೆ ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ. ನಮ್ಮ ಸಾಧ್ಯತೆಗೆ ಅನುಗುಣವಾಗಿ ವಸತಿ ರಹಿತರಿಗೆ ಸೂರು ನಿರ್ಮಿಸಿಕೊಡಲು ಮುಂದಾಗಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಗೋವುಗಳ ರಕ್ಷಣೆಗೆ ಮಠ ಹೆಚ್ಚಿನ ಒತ್ತು ನೀಡಿದೆ. ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ತೆರೆಯಬೇಕು ಎಂಬುದು ನಮ್ಮ ಅಪೇಕ್ಷೆ. ಕಾಡುಪ್ರಾಣಿ-ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು. ಎಲ್ಲರಿಗೂ ಬದುಕುವ ಹಕ್ಕಿದೆ ಎನ್ನುವ ವಿಶ್ವಾಸ ಮೂಡಿಸಬೇಕೆಂದು ಹೇಳಿದರು.
ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆರ್.ತಂತ್ರಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಇತರರು ಇದ್ದರು.
ಸಂಧಾನಕ್ಕೆ ಸಿದ್ಧ
ಮಣಿಪುರ ಪ್ರಕರಣವನ್ನು ಇಲ್ಲಿಯವರೆಗೆ ಬೆಳೆಯಲು ಬಿಟ್ಟಿದ್ದು ಸರಿಯಲ್ಲ. ಈಗ ಅದೊಂದು ದೊಡ್ಡ ಕಗ್ಗಂಟಾಗಿದೆ. ಅಲ್ಲಿ ನಡೆಯುತ್ತಿರುವ ಹಿಂಸೆಗೆ ಮೂಲ ಕಾರಣ ಏನೆಂಬುದು ಅರ್ಥವಾಗುತ್ತಿಲ್ಲ. ಈಗ ಅಲ್ಲಿ ಪರಿಸ್ಥಿತಿ ಕೈ ಮೀರಿದೆ. ದಿನಕ್ಕೊಂದು ಘಟನೆ ಜರುಗುತ್ತಿವೆ. ಶಾಂತಿ, ಸಾಮರಸ್ಯ ಮರು ಸ್ಥಾಪನೆಯ ನಿಟ್ಟಿನಲ್ಲಿ ಸಂಘರ್ಷಕ್ಕೆ ನಿಂತಿರುವ ಗುಂಪುಗಳ ಜತೆ ಮಾತನಾಡಿ, ಶಾಂತಿ ಸ್ಥಾಪನೆಗಾಗಿ ಮಧ್ಯ ಪ್ರವೇಶ ಮಾಡಲು ನಾವು ಸಿದ್ಧ ಇದ್ದೇವೆ. ಈ ನಿಟ್ಟಿನಲ್ಲಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತರೆ ಸಂಧಾನಕ್ಕೆ ಮುಂದಾಗುತ್ತೇವೆ.
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ ಪೇಜಾವರ ಮಠ