ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರು ಸಾಥ್ ನೀಡಿ

Veershetty Khyama
Published on

ಬೀದರ್: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಪ್ರತಿಯೊಬ್ಬರೂ ಕೈಲಾದಷ್ಟು ದೇಣಿಗೆ ನೀಡಿ ಪವಿತ್ರ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಶ್ರೀರಾಮ ಸೇನೆ ಹಾಗೂ ಭಾರತೀಯ ಗೋ ಪರಿವಾರ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಹೇಳಿದರು.

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕೆ ಬೆಂಬಲಿಸಿ ವಯಕ್ತಿಕವಾಗಿ 1.01 ಲಕ್ಷ ರೂ. ದೇಣಿಗೆ ನೀಡಿ ಮಾತನಾಡಿ, ಸಾಧು, ಸಂತರು, ಗಣ್ಯರು ಸೇರಿ ಅನೇಕರ ತ್ಯಾಗ, ಬಲಿದಾನದಿಂದ ರಾಮಮಂದಿರ ನಿರ್ಮಾಣ ಕನಸು ಸಾಕಾರ ಆಗುತ್ತಿದೆ. ಮಂದಿರ ನಿರ್ಮಾಣದಲ್ಲಿ ಎಲ್ಲರ ಸಹಭಾಗಿತ್ವ ಇರಬೇಕು. ದೇಣಿಗೆಗಿಂತ ಸಮರ್ಪಣೆ ಮನೋಭಾವ ಮುಖ್ಯ ಎಂದರು.

ಹಿಂದೂ ಸಮಾಜ ಉಳಿಯಲು, ಬೆಳೆಯಲು ದೇವಸ್ಥಾನಗಳು ಅಗತ್ಯ. ರಾಮ ಮಂದಿರ ದೇಶದ ಎಲ್ಲ ಜನರಿಗೆ ಭಾವನಾತ್ಮಕವಾಗಿ ಒಂದಾಗಿಸಿ ರಾಷ್ಟ್ರ ಕಟ್ಟುವ ಕೆಲಸ ಮಾಡಲಿದೆ ಎಂದು ಅಭಿಪ್ರಾಯಪಟ್ಟರು.ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ ಮಾತನಾಡಿ, ಪ್ರತಿಯೊಬ್ಬ ಭಾರತೀಯರಿಗೆ ಶ್ರೀರಾಮ ಆದರ್ಶಪುರುಷ. ಜನ್ಮ ಸ್ಥಳ ಅಯೋಧ್ಯೆಯಲ್ಲಿ ಮಂದಿರದ ನಿರ್ಮಾಣಕ್ಕೆ ಈಗ ಕಾಲ ಕೂಡಿಬಂದಿರುವುದು, ಇದಕ್ಕೆ ನಿಧಿ ಸಮರ್ಪಿಸುವ ಅವಕಾಶ ನಮಗೆ ಸಿಕ್ಕಿರುವುದು ಸೌಭಾಗ್ಯ ಎಂದರು.

ಪ್ರಮುಖರಾದ ನಾಗೇಶ ರೆಡ್ಡಿ, ಹಣಮಂತರಾವ ಪಾಟೀಲ್, ಪ್ರಕಾಶ ಟೊಣ್ಣೆ, ಪೀರಪ್ಪ ಯರನಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net