ರಾಮನ ಚರಿತೆ ಅರಿತರೆ ಬದುಕು ಸುಂದರವಾಗಲಿದೆ

07=kkr1
Published on

ಕಿಕ್ಕೇರಿ: ರಾಮ ಎಂದರೆ ಸುಂದರ ಬದುಕು ತೆರೆದುಕೊಳ್ಳಲಿದ್ದು, ತ್ಯಾಗ, ಮರ್ಯದಾ ಪುರುಷ, ಸನ್ನಡತೆಯ ಪ್ರತಿರೂಪ ಎಂದು ವೇದಬ್ರಹ್ಮಶ್ರೀ ಗೋಪಾಲಕೃಷ್ಣ ಅವಧಾನಿ ತಿಳಿಸಿದರು.


ಪಟ್ಟಣದ ಸುಬ್ಬರಾಯ ಛತ್ರದಲ್ಲಿ ವಿಪ್ರ ಬಾಂಧವ ಸಮಿತಿ ಹಮ್ಮಿಕೊಂಡಿರುವ ರಾಮನವಮಿ ವಿಶೇಷ ಕಾರ್ಯಕ್ರಮದಲ್ಲಿ ಗುರುವಾರ ರಾತ್ರಿ ರಾಮದೇವರ ಜೀವನ ಚರಿತೆ ಕುರಿತು ಉಪನ್ಯಾಸ ನೀಡಿ ಗೌರವ ಸ್ವೀಕರಿಸಿ ಮಾತನಾಡುತ್ತ, ಪ್ರಜೆ, ಲೋಕಕಲ್ಯಾಣ, ಮಾತಾಪಿತೃ ವಾಕ್ಯ ಪಾಲನೆಗಾಗಿ ವನವಾಸ ಮಾಡಿದ ದಯಾಳು. ಸೀತಾ ಅಪಹರಣಗೈದ ರಕ್ಕಸ ರಾವಣ ಸೇರಿದಂತೆ ಅಸಂಖ್ಯಾತ ದುಷ್ಟರನ್ನು ಸಂಹರಿಸಿದ ರಾಮ ಪ್ರಜಾರಕ್ಷ ಪಾಲಕನಾಗಿದ್ದಾನೆ ಎಂದರು.


ಜಾಗತಿಕ ಯುಗದಲ್ಲಿ ಸಂಸ್ಕೃತಿ ಮರೆತರೆ ವಿನಾಶ ಖಚಿತ. ಧರ್ಮದ ತಳಹದಿಯಲ್ಲಿ ಬದುಕು ಸುಂದರವಾಗಲಿದೆ. ಕುಟುಂಬ, ಸಹೋದರತ್ವ, ಭ್ರಾತೃತ್ವ ಪರಿಕಲ್ಪನೆಯನ್ನು ತೋರಿಸಿದ ರಾಮನ ಆದರ್ಶ, ಶೌರ್ಯ, ಸಾಮರ್ಥ್ಯ, ಭಕ್ತಿ ಔದಾರ್ಯ, ಉದಾರತೆ, ಸರಳತೆಯನ್ನು ಮಕ್ಕಳಿಗೆ ತಿಳಿ ಹೇಳುವ ಕೆಲಸವಾಗಬೇಕಿದೆ ಎಂದರು.
ಲಂಕಾ ರಕ್ಕಸರ ಸೇನೆ ಸದೆ ಬಡೆಯಲು ಕಪಿ ಸೇನೆ ನಿರ್ಮಿಸಿದ ರಾಮಸೇತುವೆ ನಿರ್ಮಾಣ ಇಂದಿನ ವೈಜ್ಞಾನಿಕ ಯುಗಕ್ಕೆ ದೊಡ್ಡ ಸವಾಲಾಗಿದ್ದು, ವೈಜ್ಞಾನಿಕ ಹಿನ್ನೆಲೆಯಲ್ಲಿ ಇತಿಹಾಸ ತಿರುಚುವ ಕೆಲಸವಾದಲ್ಲಿ ಜಗತ್ ನಾಶವಾಗಲಿದೆ ಎಂದು ಎಚ್ಚರಿಸಿದರು.


ಪರಿಮಳ ಪುಷ್ಪಗಳಿಂದ ಅಲಂಕೃತ ಪಟ್ಟಾಭಿರಾಮ ದೇವರಿಗೆ ಪುಷ್ಪಾರ್ಚನೆ, ಕುಂಕುಮಾರ್ಚನೆ, ಮಹಿಳಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.


ವಿಪ್ರ ಬಾಂಧವ ಸಮಿತಿಯ ಅನಿಲ್‌ಶಾಸ್ತ್ರಿ, ನರಸಿಂಹ, ಮಹಬಲರಾವ್, ಕೆ.ಎಸ್. ಪ್ರಭಾಕರ್, ಗಣೇಶರಾವ್, ಶ್ರೀಹರಿ, ಕೆ.ಎಸ್. ಪರಮೇಶ್ವರಯ್ಯ, ರಾಮಣ್ಣ ಮಾಸ್ಟರ್, ಕೆ.ಬಿ. ವೆಂಕಟೇಶ್, ಮಹಬಲಶರ್ಮ, ಭಾಸ್ಕರ್, ರೋಹಿತ್‌ಶರ್ಮ, ರಘುರಾಮ್ ನಾಡಿಗ್, ಸೀತಾರಾಮು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net