

ಎನ್.ಆರ್.ಪುರ: ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚನೆ ಜತೆಗೆ ರಾಮಾಯಣದ ಪಾತ್ರಧಾರಿಯೂ ಆಗಿದ್ದಾರೆ ಎಂದು ಬಾಳೆಹೊನ್ನೂರು ಎಸ್‌ಜೆಆರ್ ಪದವಿಪೂರ್ವ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಕೆ.ಎಂ.ರಾಕೇಶ್ ತಿಳಿಸಿದರು.
ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಋಷಿಮುನಿಗಳ ನಾಡಾಗಿದ್ದು ಇಲ್ಲಿ ಶ್ರೇಷ್ಠ ಕವಿಗಳು ಜನ್ಮ ತಾಳಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನ ವ್ಯಕ್ತಿತ್ವ ಪರಿಚಯ ಮಾಡುತ್ತ ಹೋಗುತ್ತಾರೆ. ರಾಮಾಯಣದಲ್ಲಿ 7 ಕಾಂಡಗಳಿವೆ. ಕೊನೆಯ ಉತ್ತರ ಕಾಂಡದಲ್ಲಿ ವಾಲ್ಮೀಕಿ ತಂದೆ ಯಾರು ಎಂಬುದಕ್ಕೆ ಉತ್ತರ ಸಿಗುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ವಾಲ್ಮೀಕಿ ಬರೆದ ರಾಮಾಯಣದಿಂದ ವಿಶ್ವವೇ ಭಾರತದತ್ತ ನೋಡುವಂತಾಯಿತು. ರಾಮನ ಆದರ್ಶವನ್ನು ಸಮಾಜಕ್ಕೆ ಪರಿಚಯಿಸಿದರು. ಸಿದ್ದರಾಮಯ್ಯ ಸರ್ಕಾರ ವಾಲ್ಮೀಕಿ ನಿಗಮ ಸ್ಥಾಪನೆ ಮಾಡಿ ಬುಡಕಟ್ಟು ಜನಾಂಗದವರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಆಶಯ ಹೊಂದಿದೆ. ಬೆಂಗಳೂರಿನಲ್ಲಿ ಶಾಸಕರ ಭವನದ ಎದುರು ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರ ಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ನಾಯಕಿ ಗುಡ್ಡೇಹಳ್ಳ ಕುಸುಮಾ ಹಾಗೂ ಎಸ್‌ಎಸ್‌ಎಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಅಮೂಲ್ಯಾ ಅವರನ್ನು ಪುರಸ್ಕರಿಸಲಾಯಿತು.
ರಾಮಾಯಣವು ಭಾರತದಲ್ಲಿ ಹುಟ್ಟಿದ ಎಲ್ಲರಿಗೂ ಸ್ಫೂರ್ತಿಯಾಗಿದೆ. ತ್ರೇತಾಯುಗದಲ್ಲಿ ಬರೆದ ರಾಮಾಯಣ ಗ್ರಂಥವು ಇಂದಿಗೂ ಪ್ರಸ್ತುತವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ತಿಳಿಸಿದರು. ರಾಮಾಯಣದಲ್ಲಿ ಬರುವ ಪ್ರತಿ ಪಾತ್ರವೂ ಪ್ರತಿ ಕುಟುಂಬವೂ ಅನುಕರಣೆ ಮಾಡಬೇಕಾಗಿದೆ. ಸೂರ್ಯ, ಚಂದ್ರ ಇರುವವರೆಗೂ ರಾಮಾಯಣ ಶಾಶ್ವತವಾಗಿರುತ್ತದೆ. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಡಾ. ನೂರುಲ್ ಹುದಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್, ನಿರಂಜನ್‌ಮೂರ್ತಿ, ಡಿಎಸ್‌ಎಸ್ ಮುಖಂಡರಾದ ವಾಲ್ಮೀಕಿ ಶ್ರೀನಿವಾಸ್, ಎಚ್.ಎಂ.ಶಿವಣ್ಣ, ಡಿ.ರಾಮು, ಮಂಜುನಾಥ್, ಶೆಟ್ಟಿಕೊಪ್ಪ ಮಹೇಶ್ ಇತರರಿದ್ದರು.