ಚಾಮರಾಜನಗರ: ನಗರಸಭೆಯ ಆಯುಕ್ತರಾಗಿದ್ದ ಎಸ್.ವಿ.ರಾಮದಾಸ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಚಾಮರಾಜನಗರ ನಗರಸಭೆಯಲ್ಲಿ ಭ್ರಷ್ಟಾಚಾರ, ಅಕ್ರಮ ಮಿತಿಮೀರಿದ್ದು, ಜಿಲ್ಲಾಧಿಕಾರಿಗಳು ಆಯುಕ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಹಾಗೆಯೇ ರಾಮದಾಸ್ ಅವರ ಅವಧಿಯಲ್ಲಿ ನಗರಸಭೆಯಲ್ಲಿ ನಡೆದಿರುವ ಅಕ್ರಮ ಭ್ರಷ್ಟಾಚಾರಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಯಾವುದೋ ರಾಜಕೀಯ ಒತ್ತಡಕ್ಕೆ ಒಳಗಾಗಿ ಮತ್ತೊಮ್ಮೆ ಚಾಮರಾಜನಗರ ನಗರಸಭೆಗೆ ರಾಮದಾಸ್ ಅವರನ್ನು ನೇಮಕಾತಿ ಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ರಾಜಕೀಯ ಒತ್ತಡಕ್ಕೆ ಒಳಗಾಗಿ ರಾಮದಾಸ್ ಅವರನ್ನು ನಗರಸಭೆಗೆ ಮರು ನೇಮಕಾತಿಗೊಳಿಸಿದರೆ ಸಂಘಟನೆ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಸ್ಥಳೀಯ ಶಾಸಕರು ರಾಮದಾಸ್ ಅವರನ್ನು ಮರುನಿಯುಕ್ತಿ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದಿದ್ದು ,ಒಂದು ವೇಳೆ ಶಾಸಕರು ಮರು ನೇಮಕಾತಿ ಗೊಳಿಸಿದರೆ ಶಾಸಕರ ವಿರುದ್ಧವು ಹೋರಾಟ ರೂಪಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.