

ಕೊಳ್ಳೇಗಾಲ: ನಗರಸಭೆ ಉಪಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಮತಯಾಚನೆ ಭರಾಟೆ ಜೋರಾಗಿದ್ದು, 25ನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮಕೃಷ್ಣ ಪರವಾಗಿ ಬಿಜೆಪಿ ಮುಖಂಡರು ಸೋಮವಾರ ಮತಯಾಚನೆ ಮಾಡಿದರು.
ಶಾಸಕ ಎನ್.ಮಹೇಶ್ ಮಾತನಾಡಿ, ಅ.28ರಂದು ನಡೆಯಲಿರುವ ನಗರಸಭೆ ಉಪ ಚುನಾವಣೆಯಲ್ಲಿ 25ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಮಕೃಷ್ಣ ಅವರನ್ನು ಅಧಿಕ ಮತಗಳ ಅಂತರದಲ್ಲಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಕಾರಣಾಂತರಗಳಿಂದ ಈ ಹಿಂದೆ ರಾಮಕೃಷ್ಣ ಅವರು ಗಳಿಸಿದ್ದ ಅಧಿಕಾರವಧಿ ಮೊಟಕುಗೊಂಡು ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡಲು ಸಾಧ್ಯವಾಗಲಿಲ್ಲ. ಆದರೀಗ ಉಪಚುನಾವಣೆ ಎಂಬ ಸುವರ್ಣಾವಕಾಶ ಮತ್ತೊಮ್ಮೆ ಅವರಿಗೆ ದೊರಕಿದ್ದು,
ಜನರು ಈ ಬಾರಿಯೂ ಆಶೀರ್ವದಿಸಬೇಕು. ಇದರಿಂದ ವಾರ್ಡ್‌ನಲ್ಲಿ ಆಗಬೇಕಾದ ಕೆಲಸಗಳು ಸುಲಲಿತವಾಗಿ ಉಳಿದ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ ಎಂದರು.
ಶಾಸಕನಾಗಿ ನನಗಿರುವ ಅವಧಿಯಲ್ಲಿ ವಾರ್ಡ್‌ಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದರು.
ಮುಖಂಡ ಪ್ರೀತನ್ ನಾಗಪ್ಪ ಮಾತನಾಡಿ, ವಿಶ್ವವೇ ಭಾರತವನ್ನು ತಿರುಗಿ ನೋಡುತ್ತಿದೆ. ಅಂತೆಯೇ ರಾಜ್ಯ ಸರ್ಕಾರವೂ ಜನಪರ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುತ್ತಿದೆ. ಇದನ್ನು ಮತದಾರರು ಅರಿತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಅಭ್ಯರ್ಥಿ ರಾಮಕೃಷ್ಣ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ನಗರಸಭೆ ನಾಮನಿರ್ದೇಶಿತ ಸದಸ್ಯ ಸೆಲ್ವರಾಜು, ನಗರ ಮಂಡಲ ಅಧ್ಯಕ್ಷ ಲಕ್ಷ್ಮೀಪತಿ, ನಗರಸಭೆ ಸದಸ್ಯೆ ಕವಿತಾ, ಬಿಜೆಪಿ ಜಿಲ್ಲಾ ವಕ್ತಾರ ಬಸವರಾಜು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಿನಕಹಳ್ಳಿ ರಾಚಯ್ಯ, ಮುಖಂಡರಾದ ಮಹದೇವಸ್ವಾಮಿ, ಶಿವಕುಮಾರ್, ರಾಜಶೇಖರ್ ಮೂರ್ತಿ ಇತರರಿದ್ದರು.