ರಾಮಕೃಷ್ಣ ಆಶ್ರಮದ 8 ಮುಖ್ಯಸ್ಥರು ಒಂದೇ ಗ್ರಾಮದವರು

15 upbr 1-Tadakod story
Published on

ಉಪ್ಪಿನಬೆಟಗೇರಿ: ಒಂದೇ ಗ್ರಾಮ ಹಾಗೂ ಒಂದೇ ಶಾಲೆಯಲ್ಲಿ ಕಲಿತ ಎಂಟು ಜನ ಇದೀಗ ಕಾವಿಧಾರಿಗಳಾಗಿ ರಾಜ್ಯದ ವಿವಿಧೆಡೆಯಲ್ಲಿ ಇರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾಗಿದ್ದಾರೆ!

ಧಾರವಾಡ ತಾಲೂಕಿನ ಪುಟ್ಟ ಗ್ರಾಮ ತಡಕೋಡಕ್ಕೆ ಇದೊಂದು ಹೆಮ್ಮೆಯ ಸಂಗತಿದ್ದು, ಕಲಬುರಗಿಯಲ್ಲಿ ಮಹೇಶ್ವರಾನಂದ ಮಹಾರಾಜ್, ರಾಣೆಬೆನ್ನೂರಿನಲ್ಲಿ ಪ್ರಕಾಶಾನಂದ ಮಹಾರಾಜ್, ಹೊಸಪೇಟೆಯಲ್ಲಿ ಸುಮೇಧಾನಂದ ಮಹಾರಾಜ್, ಗದಗನಲ್ಲಿ ಜಗನ್ನಾಥಾನಂದ ಮಹಾರಾಜ್, ಬೀದರನಲ್ಲಿ ಜ್ಯೋತಿರ್ಮಯಾನಂದ ಮಹಾರಾಜ್, ಬೆಂಗಳೂರಿನ ಆವಲಹಳ್ಳಿಯಲ್ಲಿ ಅಭಯಾನಂದ ಮಹಾರಾಜ್ ಹಾಗೂ ಅಲಿಪ್ತೇಶಾನಂದ ಮಹಾರಾಜ್ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಗಮನ ಸೆಳೆದಿದ್ದಾರೆ.

ಬಾಲ್ಯದಲ್ಲೇ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯಿಂದ ಪ್ರಭಾವಿತರಾದ ಇವರು, ಉಳಿದ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿದ್ದರು. 1994ರಲ್ಲಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಸ್ಥಾಪಿಸಿ ಅಲ್ಲಿ ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತು ರ್ಚಚಿಸುತ್ತಿದ್ದರು. ಆದರೂ, ಮುಂದೊಂದು ದಿನ ಇವರೆಲ್ಲ ಸಂತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆಂದು ಯಾರ ಊಹೆಗೂ ಇರಲಿಲ್ಲ.

ತಡಕೋಡದಲ್ಲಿ 1993ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ, ಅದೇ ಗ್ರಾಮದ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ ಪೂರ್ಣಗೊಳಿಸಿದ ಇವರೆಲ್ಲ ನಿರ್ಭಯಾನಂದಜೀ ಮಹಾರಾಜ್ ಹಾಗೂ ಬೆಂಗಳೂರಿನ ಪುರುಷೋತ್ತಮಾನಂದ ಸ್ವಾಮೀಜಿಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿ ಸಮಾಜಮುಖಿ ಕಾರ್ಯಗಳಿಗೆ ತುದಿಗಾಲ ಮೇಲೆ ನಿಂತಿದ್ದರು. ಬಳಿಕ ಇವರಿಬ್ಬರ ಪ್ರೇರಣೆಯಿಂದ ಕಾವಿಧಾರಿಗಳಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ.

ನಾವೆಲ್ಲ ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತರಾಗಿದ್ದೆವು. ಕುಂತರೂ ನಿಂತರೂ ಅವರ ಬಗ್ಗೆ ವಿಚಾರ ಮಾಡುತ್ತಿದ್ದೆವು. ಹೀಗಾಗಿ ತಡಕೋಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಸ್ಥಾಪಿಸಿದೆವು. ಸದ್ಯ ಗ್ರಾಮದಲ್ಲಿ ರಾಮಕೃಷ್ಣ ಪರಮಹಂಸರ ಮಂದಿರ ಸ್ಥಾಪಿಸಿ ಆ ಮೂಲಕ ಯುವ ಜನಾಂಗವನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಲಿದ್ದೇವೆ. | ಮಹೇಶ್ವರಾನಂದ ಮಹಾರಾಜ್, ಅಧ್ಯಕ್ಷರು ರಾಮಕೃಷ್ಣ ವಿವೇಕಾನಂದ ಆಶ್ರಮ ಕಲಬುರಗಿ ಶ್ರೀ ರಾಮಕೃಷ್ಣ ವಿವೇಕಾನಂದರ ಸಂದೇಶಗಳನ್ನು ಯುವ ಸಮುದಾಯಕ್ಕೆ ತಿಳಿಸುವ ಮತ್ತು ರಾಮಕೃಷ್ಣ ವಿವೇಕಾನಂದರ ಭವ್ಯ ಮಂದಿರ ನಿರ್ಮಾಣ ಮಾಡುವ ಉದ್ದೇಶದಿಂದ ತಡಕೋಡ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಮನೆಮನೆಗೆ ತೆರಳಿ ಮಾಹಿತಿ ನೀಡಲಾಗುತ್ತಿದೆ. | ಈರಣ್ಣ ಹೊಸಮನಿ ಗ್ರಾಪಂ ಸದಸ್ಯ ತಡಕೋಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net