

ಬೀದರ್: ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ 21ದಿನ ರಾಷ್ಟ್ರವ್ಯಾಪಿ ನಡೆಯಲಿರುವ ನಿಧಿ ಸಮರ್ಪಣೆ ಅಭಿಯಾನಕ್ಕೆ ಶುಕ್ರವಾರ ಬೀದರ್ ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ. ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಈ ಅಭಿಯಾನ ಶುರುವಾಗಿದ್ದು, ಫೆ. 5ರವರೆಗೆ ನಡೆಯಲಿದೆ.
ಭಾಲ್ಕಿ ಪಟ್ಟಣದ ಗಾಂಧಿ ವೃತ್ತದ ಹತ್ತಿರ ಹಮ್ಮಿಕೊಂಡಿದ್ದ ಅಭಿಯಾನ ಚಾಲನೆ ಸಮಾರಂಭದಲ್ಲಿ ಮಾತನಾಡಿದ ಮೆಹಕರ್-ತಡೊಳಾ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು, ಇದು ಕೇವಲ ಶ್ರೀರಾಮ ಮಂದಿರವಲ್ಲ. ಇದರ ಮೂಲಕ ರಾಮ್ಯ ರಾಜ್ಯದ ನಿರ್ಮಾಣಕ್ಕೂ ಭದ್ರ ಬುನಾದಿ ಬೀಳಲಿದೆ. ಇಡೀ ದೇಶಕ್ಕೆ ಹೊಸ ಶಕ್ತಿ, ಚೈತನ್ಯ ತುಂಬಿ ಪರಿವರ್ತನೆ ಗಾಳಿ ಬೀಸಲು ಇದು ಪ್ರೇರಕ ಶಕ್ತಿಯಾಗಲಿದೆ ಎಂದು ವ್ಯಾಖ್ಯಾನಿಸಿದರು.
ಹಲಬರ್ಗಾ ರಾಚೋಟೇಶ್ವರ ಸಂಸ್ಥಾನದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಶ್ರೀರಾಮ ಆದರ್ಶಪುರುಷರು. ಅವರ ಚಿಂತನೆ ಸುಂದರ ಸಮಾಜ ನಿರ್ಮಾಣಕ್ಕೆ ಶಕ್ತಿಯಾಗಿವೆ. ಹಿಂದೂ ಎನ್ನುವುದು ಶಕ್ತಿಯ ಸಂಕೇತ. ಅದು ಕೇವಲ ತೊರಿಕೆಯಾಗದೆ, ದಿನದ 24 ಗಂಟೆಯೂ ಹಿಂದೂವಾಗಿರಬೇಕು. ಎಲ್ಲರೂ ಗರ್ವದಿಂದ ಎದೆ ತಟ್ಟಿ ಹಿಂದೂ ಎಂದು ಹೇಳುವ ಜತೆಗೆ ಸಂಘಟಿತರಾದರೆ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂದರು.
ನಿಧಿ ಸಮರ್ಪಣೆ ಅಭಿಯಾನ ವಿಭಾಗ ಪ್ರಮುಖ ಶಿವಲಿಂಗ ಕುಂಬಾರ ಮಾತನಾಡಿ, ಬರುವ ಫೆ. 5ವರೆಗೆ ಜಿಲ್ಲೆಯ ಪ್ರತಿ ಗ್ರಾಮದ ಮನೆ ಮನೆಗೆ ಕಾರ್ಯಕರ್ತರ ತಂಡ ತಲುಪಿ ನಿಧಿ ಸಂಗ್ರಹಿಸಲಿದೆ. ಮಂದಿರ ನಿರ್ಮಾಣದ ಐತಿಹಾಸಿಕ ಹಾಗೂ ಪವಿತ್ರ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗುವ ಅವಕಾಶ ಒಲಿದುಬಂದಿದೆ ಎಂದರು.
ಸೂರಜಸಿಂಗ್ ರಜಪೂತ ಪ್ರಾಸ್ತಾವಿಕ ಮಾತನಾಡಿ, ರಾಮಮಂದಿರ ಹೋರಾಟದ ಹಾದಿ ಮತ್ತು ತ್ಯಾಗ, ಬಲಿದಾನ ವಿವರಿಸಿದರು. ಪ್ರಮುಖರಾದ ಸುಧಾಕರರಾವ ದೇಶಪಾಂಡೆ, ಪ್ರಭುರಾವ ಧೂಪೆ, ಸಂದೀಪ ತೆಲಗಾಂವಕರ್, ಶಿವು ಲೋಖಂಡೆ, ಸತೀಶ ಮುದಾಳೆ, ದತ್ತಾತ್ರಿ ತೂಗಾಂವಕರ, ಸುಧೀರ ನಾಯಕ್, ದಯಾನಂದ ಪವಾರ್, ರೇವಣಸಿದ್ದ ಜಾಡರ್, ಅನಿಲ ತಳವಾಡೆ, ಶಿವರಾಜ ಗಂದಗೆ, ಪ್ರಕಾಶ ಮಾಶೆಟ್ಟೆ. ಸುರೇಶ ಬಿರಾದಾರ, ಜನಾರ್ಧನ ಬಿರಾದಾರ ಇತರರಿದ್ದರು. ರಾಚಪ್ಪ ಪಾಟೀಲ್, ಜಗನ್ನಾಥ ಬಿರಾದಾರ, ಸುಧೀರ ನಾಯಕ, ಬಸವರಾಜ ವಂಕೆ ಸೇರಿದಂತೆ ಅನೇಕ ಗಣ್ಯರು ಚೆಕ್ ಮೂಲಕ ತಾಲೂಕಿನ ಮೊದಲಿಗರಾಗಿ ನಿಧಿ ಸಮರ್ಪಣೆ ಮಾಡಿದರು.
ಶ್ರೀರಾಮಚಂದ್ರರ ಜನ್ಮ ಸ್ಥಾನದಲ್ಲಿಯೇ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸುದೈವ. ಈ ಮಂದಿರಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಸೌಭಾಗ್ಯವೇ ಸರಿ. ಪ್ರತಿಯೊಬ್ಬ ಭಕ್ತರು ತನು, ಮನ, ಧನದಿಂದ ಅಭಿಯಾನದಲ್ಲಿ ಪಾಲ್ಗೊಳ್ಳಿ.| ಶ್ರೀ ರಾಜೇಶ್ವರ ಶಿವಾಚಾರ್ಯ,ಮೆಹಕರ್-ತಡೋಳಾ ಸಂಸ್ಥಾನ