ರಾಬರಿ ಮಾಡಿದ್ದ ವಾಹನ ಹಿಡಿದ ಬೀಳಗಿ ಪೊಲೀಸರು

bkt-22-11
ಬೆಳಗಾವಿ ಜಿಲ್ಲೆಯಿಂದ ಕಿರಾಣಿ ತುಂಬಿದ್ದ ಬುಲೆರೋ ವಾಹನವನ್ನು ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ಪೊಲೀಸರು ಬೀಳಗಿ ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿರುವುದು.
Published on

ಬಾಗಲಕೋಟೆ: ಕಿರಾಣಿ ವಸ್ತುಗಳನ್ನು ತುಂಬಿದ್ದ ಬುಲೆರೋ ಪಿಕಪ್ ವಾಹನವನ್ನು ರಾಬರಿ ಮಾಡಿಕೊಂಡು ಪರಾರಿ ಆಗುತ್ತಿದ್ದ ಕಳ್ಳರಿಂದ ವಾಹನ ಹಿಡಿಯುವಲ್ಲಿ ಜಿಲ್ಲೆಯ ಬೀಳಗಿ ಠಾಣೆ ಪೊಲೀಸರು ಯಶಸ್ವಿಯಾಗಿರುವುದು ಶನಿವಾರ ಬೆಳಗಿನ ಜಾವ ೨ ರಿಂದ ೩ ಗಂಟೆಯ ವೇಳೆಗೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದ್ದ ವಾಹನವನ್ನು ಇಬ್ಬರು ಕಳ್ಳರು ಸೇರಿಕೊಂಡು ಚಾಲಕನ ಮೇಲೆ ಹಲ್ಲೆ ಮಾಡಿ ವಾಹನ ತೆಗೆದುಕೊಂಡು ಅಲ್ಲಿಂದ ಪರಾರಿ ಆಗಿದ್ದರು.

ಈ ಬಗ್ಗೆ ಬೆಳಗಾವಿ ಪೊಲೀಸರು ಬಾಗಲಕೋಟೆ ಜಿಲ್ಲೆಯ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ತಡರಾತ್ರಿ ಜಾಗೃತರಾಗಿ, ಬೀಳಗಿ ಕ್ರಾಸ್ ಬಳಿ ಎರಡು ಕಡೆಗೆ ನಾಕಾಬಂದಿ ಹಾಕಿದ್ದರು. ಆದರೆ, ಕಳ್ಳರು ಬ್ಯಾರಿಕೇಡ್ ನೋಡಿ ವಾಹನದ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಬ್ಯಾರಿಕೇಡ್ ಗೆ ಗುದ್ದಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು. ಬಳಿಕ ಎರಡನೇ ನಾಕಾಬಂದಿಯಲ್ಲಿ ಟ್ರಿಕ್ ಅಡ್ಡನಿಲ್ಲಿಸಿ ಕಾರ್ಯಾಚರಣೆಗೆ ಪೊಲೀಸರು ಸಜ್ಜಾಗಿದ್ದರು. ಆಗ ವೇಗದಲ್ಲಿ ಇದ್ದ ವಾಹನ ಟ್ರಕ್ ಪಕ್ಕದಲ್ಲಿ ನಿಂತಿದ್ದ ಪೊಲೀಸರಿಗೆ ಗುದ್ದಿ ಮುಂದೆ ಹೋಗಲು ಯತ್ನಿಸಿದ್ದು, ಈ ವೇಳೆ ಪೊಲೀಸರೊಬ್ಬರು ಬ್ಯಾರಿಕೇಡ್‌ನ್ನು ವಾಹನದ ಕಡೆಗೆ ತಳ್ಳಿದ್ದಾನೆ. ಆಗ ವಾಹನದ ಟೈರ್ ಅಡಿ ಬ್ಯಾರಿಕೇಡ್ ಸಿಲುಕಿದೆ. ಇನ್ನೇನು ಕಳ್ಳರನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಕತ್ತಲು ಇದ್ದಿದ್ದರಿಂದ ಇಬ್ಬರು ಕಳ್ಳರು ವಾಹನ ಬಿಟ್ಟು ಕಬ್ಬಿನ ಹೊಲದಲ್ಲಿ ಹಾಯ್ದುಹೋಗಿ ಪರಾರಿ ಆಗಿದ್ದಾರೆ. ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಪೊಲೀಸರು ಸಿನಿಮಿಯ ರೀತಿಯಲ್ಲಿ ವಾಹನವನ್ನು ಹಿಡಿದಿದ್ದಾರೆ. ಈ ವೇಳೆ ಪೊಲೀಸರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬೀಳಗಿ ಪಿಎಸ್‌ಐ ಪ್ರವೀಣ ಬೀಳಗಿ ನೇತೃತ್ವದಲ್ಲಿ ತಡರಾತ್ರಿ ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಇದೀಗ ಪರಾರಿ ಆಗಿರುವ ಇಬ್ಬರು ಕಳ್ಳರ ಪತ್ತೆಗಾಗಿ ಜಾಲಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net