ಬಳ್ಳಾರಿ : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಹಕಾರ ಸಂಘದ ಒಕ್ಕೂಟದಲ್ಲಿ ಅಕ್ರಮವಾಗಿ ನೇಮಕಾತಿ ಹಾಗೂ ಪದೋನ್ನೂತಿಯನ್ನು ನೀಡಿರುತ್ತಾರೆ ಎಂದು ಆರೋಪಿಸಿ ಒಕ್ಕೂಟದ ಅಧ್ಯಕ್ಷ ಎಲ್.ಬಿ.ಪಿ. ಭೀಮಾನಾಯ್ಕ, ನಿರ್ದೇಶಕ ಎಚ್.ಮರಳಸಿದ್ದಪ್ಪ, ವ್ಯವಸ್ಥಾಪಕ ನಿರ್ದೇಶಕ ಟಿ. ತಿರುಪೆತಪ್ಪ ವಿರುದ್ಧ ಸಿರುಗುಪ್ಪ ತಾಲೂಕಿನ ಕರೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕೆ. ಪ್ರತಾಪ್‌ರೆಡ್ಡಿ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಶುಕ್ರವಾರ ದೂರು ನೀಡಿದ್ದಾರೆ.
ಒಕ್ಕೂಟದಲ್ಲಿ ಮೂವರು ಸೇರಿ ನಡೆಸಿದ ಅವ್ಯವಹಾರ ಕುರಿತು ಕಾನೂನು ರೀತಿ ತನಿಖೆ ನಡೆಸಿ, ಅವರಿಂದ ಆಗಿರುವ ನಷ್ಟವನ್ನು ಕಾನೂನು ರೀತಿಯಲ್ಲಿ ವಸೂಲಿ ಮಾಡಲು ಕ್ರಮವಹಿಸಬೇಕು. ಪಿ. ಗೋವಿಂದರಾಜುಲು ಬಳಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಲಕ್ಷಾಂತರ ರೂ. ಹಣ ಪಡೆದು ಸಹಕಾರಿ ಸಂಘಗಳ ವಿರುದ್ಧ ಅಕ್ರಮವಾಗಿ ನೇಮಕಾತಿ ಹಾಗೂ ಪದೋನ್ನತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. 23.02.21 ರಲ್ಲಿ ನಡೆದ 62ನೇ ತಜ್ಞ ಕೂಟ ಸಮಿತಿಗೆ ಸಭೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಗೈರು ಹಾಜರಾಗಿರುತ್ತಾರೆ. ನಿಬಂಧಕರನ್ನು ಹೊರತುಪಡಿಸಿ ನಡೆಸಿದ ಸಭೆ ಅಸಿಂಧುವಾಗಿರುತ್ತದೆ ಎಂಬ ಷರಾಯಿದೆ. 01.07.22ರ ಅನ್ವಯ ಒಕ್ಕೂಟದ ಆಡಳಿತ ಅಧೀಕ್ಷಕರ ಹುದ್ದೆಗೆ ಪಿ. ಗೋವಿಂದರಾಜುಲು ಅರ್ಹರಾಗಿದ್ದಾರೆ ಎಂದು ಸಭಾ ನಡುವಳಿಗಳಲ್ಲಿ ನಮೂದಿಸಲಾಗಿದೆ. ಬಿ.ಎ.(ಅಂಗ್ಲ) ಮತ್ತು ಕನ್ನಡ ಸೀನಿಯರ್ ಬೆರಳಚ್ಚು ಮತ್ತು ಡಿಪ್ಲೋಮಾ ಇನ್ ಕೋ - ಅಪರೇಟಿವ್ ಮ್ಯಾನೇಜ್‌ಮೆಂಟ್‌ನಲ್ಲಿ ಹೆಚ್‌ಡಿಸಿಎಂ ಎಂದು ಪರಿಗಣಿಸಿ ಹುದ್ದೆಗೆ ಶಿಫಾರಸ್ಸು ಮಾಡಲಾಗಿದೆ. ಆಡಳಿತ ಅಧ್ಯಕ್ಷರ ಹುದ್ದೆಗೆ ಮಾನ್ಯತೆ ಪಡೆದ ವಿವಿಯಿಂದ ಪದವೀಧರರಾಗಿ ಆಡಳಿತ ಸಹಾಯಕ ದರ್ಜೆ/ ಸೀನಿಯರ್ ಸಿಸ್ಟಮ್ ಅಪರೇಟರ್ ಆಗಿ ಕನಿಷ್ಟ ಐದು ವರ್ಷಗಳ ತೃಪ್ತಿಕರ ಸೇವಾ ಪೂರ್ಣಗೊಳಿಸಿದವರಿಗೆ ಜೇಷ್ಠತಾ ಮತ್ತು ಅರ್ಹತಾ ಆಧಾರದ ಮೇಲೆ ನೀಡಬಹುದು ಅಥವಾ ಮಾನ್ಯತೆ ಪಡೆದ ವಿವಿಯಿಂದ ಒಂದನೇ ದರ್ಜೆಯಲ್ಲಿ ಎಲ್‌ಎಲ್‌ಬಿ, ಎಂಬಿಎ ಪದವಿ ಹೊಂದಿರಬೇಕು. ಕನಿಷ್ಠ ಆರು ತಿಂಗಳ ಅವಧಿಗೆ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಡಿಪ್ಲೋಮಾ ತಂತ್ರಜ್ಞಾನ ಹೊಂದಿರಬೇಕು. ಆದರೆ, ಪಿ.ಗೋವಿಂದರಾಜುಲು ಕೇವಲ ಬಿ.ಎ. ಪದವೀಧರರಾಗಿರುತ್ತಾರೆ. ಆದ್ದರಿಂದ ಸೂಕ್ತ ವಿಚಾರಣೆ ನಡೆಸಿ ವಜಾಗೊಳಿಸಬೇಕು ಎಂದು ದೂರಿನಲ್ಲಿ ಪ್ರತಾಪ್ ರೆಡ್ಡಿ ಉಲ್ಲೇಖಿಸಿದ್ದಾರೆ.