

ಭದ್ರಾವತಿ: ಸರ್ ಎಂ.ವಿಶ್ವೇಶ್ವರಯ್ಯ ಅವರು ಕಟ್ಟಿದ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚಬೇಡಿ. ಬಂಡವಾಳ ತೊಡಗಿಸಿ ಉತ್ಪಾದನೆ ಮುಂದುವರಿಸುವ ಮೂಲಕ ಕಾರ್ಮಿಕರಿಗೆ ಕೆಲಸ ನೀಡಿ ಎಂಬ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸುವ ಗುತ್ತಿಗೆ ಕಾರ್ಮಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಕೊನೆಯ ಪ್ರಯತ್ನ ವಿಫಲಗೊಂಡಿತು. ಗುತ್ತಿಗೆ ಕಾರ್ಮಿಕರು, ಶಾಸಕರಾದಿಯಾಗಿ ಸ್ಥಳೀಯ ವಿವಿಧ ಪಕ್ಷಗಳ ಮುಖಂಡರು ಜೈಲು ಸೇರುವ ಮೂಲಕ ತಮ್ಮ ಸೋಮವಾರದ ಹೋರಾಟವನ್ನು ಮುಗಿಸಬೇಕಾಯಿತು.
ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಬೈಕ್ ರ‌್ಯಾಲಿ ಮೂಲಕ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಬೆಳಗ್ಗೆ 6 ಗಂಟೆಗೆ ಕಾರ್ಖಾನೆ ಮುಂಭಾಗ ಜಮಾಯಿಸಿದ್ದರು. ಕಾರ್ಖಾನೆ ಗೇಟ್ ಮುಂಭಾಗದಿಂದ ಯಾವುದೇ ರಸ್ತೆಯಲ್ಲೂ ಕಾರ್ಮಿಕರು ಸೋಗಾನೆ ತಲುಪದಂತೆ ಎಚ್ಚರ ವಹಿಸಿದ್ದ ಪೊಲೀಸ್ ಅಧಿಕಾರಿಗಳು ಕಾರ್ಮಿಕರನ್ನು ಗೇಟ್ ಮುಂಭಾಗವೇ ತಡೆ ಹಿಡಿಯುವ ಪ್ರಯತ್ನವಾಗಿ ನಾಕಾ ಬಂಧಿಯಾಗಿ ಇಲಾಖಾ ವಾಹನಗಳನ್ನು ನಿಲ್ಲಿಸುವ ಮೂಲಕ ಕಾರ್ಮಿಕರನ್ನು ಸುತ್ತುವರಿದಿದರು.
ಇದಕ್ಕೂ ಮುನ್ನ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವಾಗಿ ಪೊಲೀಸ್ ಅಧಿಕಾರಿಗಳು ಭಾನುವಾರ ಮಧ್ಯರಾತ್ರಿ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಎಚ್.ಜಿ.ಸುರೇಶ್, ರಾಕೇಶ್ ಸೇರಿದಂತೆ 15 ಮಂದಿಯನ್ನು ಅವರ ಮನೆಗಳಿಗೆ ತೆರಳಿ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಹೋಗದಂತೆ ಬಂಧಿಸಿ ಹೊಳೆಹೊನ್ನೂರು ಮಾರ್ಗವಾಗಿ ಸಾಗಿಸಿದ್ದರು. ಇದನ್ನು ಕಂಡ ಕೆಲ ಹೋರಾಟಗಾರರು ತಮ್ಮ ಹೋರಾಟವನ್ನು ಮುಂದುವರಿಸುವ ನಿಟ್ಟಿನಲ್ಲಿ ಕಾರ್ಖಾನೆ ಮುಂಭಾಗ ಜಮಾಯಿಸಿ ಹೋರಾಟದ ಕಿಚ್ಚು ರೂಪಿಸಿದರು.
ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದ ಆಹ್ವಾನವನ್ನು ತ್ಯಜಿಸಿದ ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜೆಡಿಎಸ್‌ನ ಪ್ರಮುಖರಾದ ಶಾರದಾ ಅಪ್ಪಾಜಿ, ಕರುಣಾಮೂರ್ತಿ, ಜೆ.ಪಿ.ಯೋಗೇಶ್, ಎಂ.ಎ.ಅಜಿತ್, ಆಮ್ ಆದ್ಮಿ ಪಾರ್ಟಿ ಮುಖಂಡರು, ವಕೀಲ ಟಿ.ಚಂದ್ರೇಗೌಡ, ಬಿಸಿಯೂಟ ಕಾರ್ಯಕರ್ತೆಯರ ನೇತಾರೆ ಹನುಮಮ್ಮ ಕಾರ್ಖಾನೆ ಗೇಟ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಶಾಸಕ ಬಿ.ಕೆ.ಸಂಗಮೇಶ್ವರ್ ಬಂಧನ: ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಬಿಳಕಿ ವೃತ್ತದಲ್ಲಿ ಪ್ರತಿಭಟನೆನಿರತರಾದ ಶಾಸಕ ಬಿ.ಕೆ.ಸಂಗಮೇಶ್ವರ್, ಕಾಂಗ್ರೆಸ್ ನಾಯಕರು ಹಾಗೂ ಗುತ್ತಿಗೆ ಕಾರ್ಮಿಕರು ಬ್ಯಾರಿಕೇಡ್ ಸರಿಸಿ ಶಿವಮೊಗ್ಗದೆಡೆಗೆ ನುಗ್ಗಲು ಮುಂದಾದರು. ಹೋರಾಟದ ಸ್ವರೂಪ ಬದಲಾಗುವ ಪರಿಸ್ಥಿತಿ ಅರಿತ ಪೊಲೀಸರು ಬಿ.ಕೆ.ಸಂಗಮೇಶ್ವರ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಗುತ್ತಿಗೆ ಕಾರ್ಮಿಕರನ್ನು ಬಂಧಿಸಿ ಬಸ್ ಹತ್ತಿಸಿದರು. ನಂತರ ಹೆಚ್ಚುವರಿ ಜಿಲ್ಲಾರಕ್ಷಣಾಧಿಕಾರಿಗಳೊಂದಿಗೆ ಮಾತನಾಡಲು ಮುನ್ನುಗ್ಗಿದ ಜೆಡಿಎಸ್‌ನ ಶಾರದಾ ಅಪ್ಪಾಜಿ, ಎಂ.ಎ.ಅಜಿತ್, ಕರುಣಾಮೂರ್ತಿ, ಜೆ.ಪಿ ಯೋಗೇಶ್, ವಕೀಲ ಟಿ.ಚಂದ್ರೇಗೌಡ, ಅವರನ್ನು ಬಂಧಿಸಿ ಕರೆದೊಯ್ದರು. ವಕೀಲ ಟಿ.ಚಂದ್ರೇಗೌಡ ತಮ್ಮ ಕಪ್ಪು ಬಣ್ಣದ ಶರ್ಟ್ ಕಳಚಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಕಾರ್ಮಿಕರು ಪಕ್ಕದ ಗದ್ದೆಗಳ ಮೂಲಕ ವಿಮಾನ ನಿಲ್ದಾಣದ ಕಡೆಗೆ ನಡೆದರು.