ರಾತ್ರಿ ವೇಳೆ ಹೆರಿಗೆ ಮಾಡಲು ನಿರಾಕರಣೆ

28-GPT-1 (1)
ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ತಾಯಿ-ಮಕ್ಕಳ ಆಸ್ಪತ್ರೆ.
Published on

ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಹೆರಿಗೆ ಮಾಡಿಸದೆ ಸಾಗಹಾಕುವ ಮೂಲಕ ಬಡವರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಸುಸಜ್ಜಿತ ತಾಯಿ-ಮಕ್ಕಳ ಆಸ್ಪತ್ರೆಯಿದ್ದರೂ ನಿರ್ವಹಣೆ ಕೊರತೆಯಿಂದ ರೋಗಿಗಳು ತೊಂದರೆ ಅನುಭವಿಸುವಂತಾ ಗಿದೆ. ಕರೆಂಟ್ ಹೋದ ಸಂದರ್ಭ ಜನರೇಟರ್ ಆನ್ ಮಾಡುವವರೆಗೂ ಕಗ್ಗತ್ತಲಿನಲ್ಲಿ ಕಾಲ ಕಳೆಯಬೇಕಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ಗೈನಕಾಲಜಿಸ್ಟ್ ಹಾಗೂ ಒಬ್ಬರು ಅರಿವಳಿಕೆ ತಜ್ಞ ಇದ್ದಾರೆ. ಆದರೂ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗದ ಪರಿಣಾಮ ಈ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಸುಗಮವಾಗಿ ಹೆರಿಗೆ ಮಾಡಿಸಲು ತೊಂದರೆಯಾಗುತ್ತಿದೆ.

ತಜ್ಞ ವೈದ್ಯರಿಲ್ಲ ಎಂಬ ಕಾರಣ ಹೇಳುವ ನರ್ಸ್‌ಗಳು ಗರ್ಭಿಣಿಯರನ್ನು ಕಬ್ಬಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಅಥವಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸುತ್ತಾರೆ. ಒಂದು ವೇಳೆ ತುರ್ತು ಹೊಟ್ಟೆನೋವು ಕಾಣಿಸಿಕೊಂಡವರಿಗೆ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಬದಲು ನರ್ಸ್‌ಗಳೇ ಹೆರಿಗೆ ಮಾಡಿಸುವ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಆ ಬಳಿಕ ತೊಂದರೆ ಎದುರಾದರೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸುವ ಕೆಲಸ ಆಗುತ್ತಿದೆ. ಈ ಸಂದರ್ಭದಲ್ಲಿ ಗರ್ಭಿಣಿ, ಬಾಣಂತಿ ಅಥವಾ ಮಗುವಿನ ಜೀವಕ್ಕೆ ತೊಂದರೆಯಾದರೆ ಯಾರು ಹೊಣೆ ಎಂಬುದು ರೋಗಿಗಳ ಸಂಬಂಧಿಕರ ಆತಂಕವಾಗಿದೆ.

ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಕರೆಂಟ್ ಹೋದರೆ ಯುಪಿಎಸ್ ವ್ಯವಸ್ಥೆ ಇಲ್ಲ. ಜನರೇಟರ್ ಆನ್ ಮಾಡುವವರೆಗೂ ರೋಗಿಗಳು ಕತ್ತಲಿನಲ್ಲಿಯೇ ಇರುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷೃ ತೋರುತ್ತಿರುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪಟ್ಟಣ ನಿವಾಸಿ ನಂದೀಶ್ ವಿಜಯವಾಣಿಗೆ ತಿಳಿಸಿದರು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ರೋಗಿಯ ಸಂಬಂಧಿಕರು ಕರೆ ಮಾಡಿ ದೂರು ನೀಡಿದ್ದಾರೆ. ಇನ್ನು ಮುಂದೆ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿಯೂ ರಾತ್ರಿ ವೇಳೆ ಒಬ್ಬರು ಗೈನಕಾಲಜಿಸ್ಟ್ ಸೇವೆ ಸಲ್ಲಿಸುವಂತೆ ಆದೇಶ ನೀಡಲಾಗುವುದು.
ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ

ಅವ್ಯವಸ್ಥೆಯನ್ನು ಪರಿಶೀಲಿಸುವ ಸಲುವಾಗಿ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡಲಾಗುವುದು. ಅಲ್ಲದೆ, ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
ಎಚ್.ಎಂ.ಗಣೇಶ್ ಪ್ರಸಾದ್ ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net