ರಾತ್ರಿ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನ

21CBP2 Ȇ 0
Published on

ಚಿಕ್ಕಬಳ್ಳಾಪುರ : ಕರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಏ.21ರಿಂದ ಮೇ 4ರವರೆಗಿನ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸೂಚಿಸಿರುವ ಜಿಲ್ಲಾಧಿಕಾರಿ ಆರ್.ಲತಾ, ಯಾವುದೇ ಕಾರಣಕ್ಕೂ ಉಲ್ಲಂಘನೆಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು,

ರಾಜ್ಯಾದ್ಯಂತ ರಾತ್ರಿ 9ರಿಂದ ಮುಂಜಾನೆ 6ರವರೆಗೆ ರಾತ್ರಿ ಕರ್ಯ್ೂ ಹಾಗೂ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಬೇಕೆಂದರು.

ಷರತ್ತುಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಪಡೆದಿರುವ ಸಂಸ್ಥೆಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯುವ ಜತೆಗೆ ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸಬೇಕು. ಹೂವು, ಹಣ್ಣು, ತರಕಾರಿ ಸಗಟು ಮಾರುಕಟ್ಟೆಗಳನ್ನು ಏ.23ರ ಬಳಿಕ ತೆರೆದ ಸ್ಥಳ ಅಥವಾ ಮೈದಾನಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ದನದ ಸಂತೆ, ಜಾತ್ರೆ, ಉತ್ಸವಗಳನ್ನು ನಿಷೇಧಿಸಲಾಗಿದೆ. ಪರ್ಯಾಯ ಸ್ಥಳಗಳಲ್ಲಿ ನಡೆಯಲಿರುವ ಮಾರುಕಟ್ಟೆಗಳಲ್ಲಿ ಜನ ಸಂದಣಿಗೆ ಅವಕಾಶವಿರುವುದಿಲ್ಲ, ಹಗಲಿನ ವೇಳೆ ಮಾತ್ರ ಮದುವೆ ಕಾರ್ಯಕ್ರಮ ನಡೆಯಬೇಕಿದ್ದು, ಅದಕ್ಕೂ ಗರಿಷ್ಠ 50 ಮಂದಿಗೆ ಮಾತ್ರ ಅವಕಾಶವಿದೆ. ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಪಾಸ್ ಪಡೆದಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ವಿವರಿಸಿದರು.

ನೈಟ್ ಕರ್ಫ್ಯೂ ಪ್ರಾರಂಭವಾಗುವುದರೊಳಗೆ ಎಲ್ಲ ಅಂಗಡಿ, ಹೋಟೆಲ್ ಸೇರಿ ವಾಣಿಜ್ಯ ಕೇಂದ್ರಗಳು ಬಾಗಿಲು ಮುಚ್ಚಿರಬೇಕು. ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲ ಸಂಚಾರ ಸ್ತಬ್ಧವಾಗಲಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net