

ಹುಬ್ಬಳ್ಳಿ: ಕರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ರಾತ್ರಿ ಕರ್ಫ್ಯೂಗೆ ವಾಣಿಜ್ಯ ನಗರಿಯಲ್ಲಿ ಉತ್ತಮ ಜನಸ್ಪಂದನೆ ವ್ಯಕ್ತವಾಗಿದೆ. ಮೊದಲ ದಿನವಾದ ಬುಧವಾರ ರಾತ್ರಿ 9ಕ್ಕೆಲ್ಲ ಜನರು ಮನೆ ಸೇರಿಕೊಳ್ಳತೊಡಗಿದ್ದು ಕಂಡುಬಂತು.
ಬುಧವಾರ ರಾತ್ರಿ 8 ಗಂಟೆಯಾಗುತ್ತಿದ್ದಂತೆ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮೈಕ್ ಮೂಲಕ ಅಂಗಡಿ ಮುಂಗಟ್ಟು ಬಂದ್ ಮಾಡುವಂತೆ ಸೂಚನೆ ನೀಡಿದರು. ಸಾರ್ವಜನಿಕರು ಬೇಗ ಬೇಗ ಮನೆ ಸೇರಿಕೊಳ್ಳಬೇಕು ಎಂದು ವಿನಂತಿಸಿದರು. ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾತ್ರಿ 8.30ಕ್ಕೆ ಅಂಗಡಿ, ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ನಂತರ ಪೊಲೀಸರು ಲಾಠಿ ಹಿಡಿದು ಓಡಾಡಿದರು. ಎದುರಿಗೆ ಸಿಕ್ಕ ಸಾರ್ವಜನಿಕರಿಗೆ ಬೇಗ ಮನೆ ತಲುಪಿ, ಇಲ್ಲದಿದ್ದರೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಪೊಲೀಸ್ ಆಯುಕ್ತ ಲಾಭೂರಾಮ ನಗರ ಪ್ರದಕ್ಷಿಣೆ ಮಾಡಿದರು. ಚನ್ನಮ್ಮ ವೃತ್ತ, ರಾಯಣ್ಣ ವೃತ್ತಕ್ಕೆ ಆಗಮಿಸಿ ನೈಟ್ ಕರ್ಫ್ಯೂ ಪರಿಶೀಲಿಸಿದರು. ನಂತರ ಜನತಾ ಬಜಾರ್, ಕೊಪ್ಪಿಕರ ರಸ್ತೆ, ದುರ್ಗದ ಬೈಲ್ ಮತ್ತಿತರ ಪ್ರದೇಶದಲ್ಲಿ ಸಂಚರಿಸಿ ಜನರಿಗೆ ತಿಳಿವಳಿಕೆ ನೀಡಿದರು.
ಜಿಲ್ಲೆಯಲ್ಲಿ ಬೆಡ್, ಆಮ್ಲಜನಕ ಕೊರತೆ ಇಲ್ಲ
ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಯಾಗಿದೆ. 9 ಗಂಟೆಯೊಳಗೆ ಅಂಗಡಿ- ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಜನ ಸ್ವಯಂ ಪ್ರೇರಣೆಯಿಂದ ಸ್ಪಂದಿಸುತ್ತಿದ್ದಾರೆ. ವಾರಾಂತ್ಯದ ಕರ್ಫ್ಯೂವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ನಗರ ಪ್ರದಕ್ಷಿಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನೀಡಿದ 14 ದಿನದ ಟಾರ್ಗೆಟ್ನಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್ ಕಾರ್ಯಾಚರಣೆಯೂ ನಡದಿದೆ. ಮಾಸ್ಕ್ ಧರಿಸದವರಿಗೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ. ಸಾರ್ವಜನಿಕರು ಸಹ ಕರೊನಾ ಹರಡುವಿಕೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜನ ಬದಲಾಗುತ್ತಿದ್ದಾರೆ
2020ರ ಬೇಸಿಗೆಯಲ್ಲಿ ಲಾಕ್ಡೌನ್ ಜಾರಿ ಮಾಡಿದಾಗ ಕೆಲವರು ಕೆಲಸ ಇಲ್ಲದಿದ್ದರೂ ಮನೆಯಿಂದ ಹೊರಗೆ ಬಂದು, ಪೊಲೀಸರ ತಾಳ್ಮೆ ಕೆಡಿಸುತ್ತಿದ್ದರು. ಆದರೆ, ಪ್ರಸಕ್ತ ವರ್ಷ ಕರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಬದಲು ಕರ್ಫ್ಯೂ ಜಾರಿ ಮಾಡಿದ್ದಕ್ಕೆ ಸಾರ್ವಜನಿಕರು ಸಂತೋಷದಿಂದಲೇ ಸ್ಪಂದಿಸುತ್ತಿರುವುದು ಬುಧವಾರ ರಾತ್ರಿ ಕಂಡುಬಂತು. ಜನರೂ ಬದಲಾಗುತ್ತಿದ್ದಾರೆ ಎಂಬಂತೆ ಭಾಸವಾಯಿತು.