

ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಾಣೆಯಾರ್ ಸಮಾಜವು ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸರ್ಕಾರದ ಸವಲತ್ತಿನಿಂದ ವಂಚಿತರಾಗುವ ಜೊತೆಗೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ರಾಣೆಯಾರ್ ಸಮಾಜ ಸೇವಾ ಸಂಘದ ರಾಜ್ಯ ಕೋಶಾಧಿಕಾರಿ ಶಿವಣ್ಣ ತಿಳಿಸಿದರು.
ತಾಲೂಕಿನ ಆವತಿ ಗ್ರಾಮದಲ್ಲಿ ಜಿಲ್ಲಾ ರಾಣೆಯಾರ್ ಸಮಾಜದ ನೂತನ ಜಿಲ್ಲಾ ಘಟಕ ಸ್ಥಾಪನೆ ಹಾಗೂ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಅಭಿವೃದ್ಧಿಯಲ್ಲಿ ಕೇವಲ ಪದಾಧಿಕಾರಿಗಳ ಶ್ರಮ ಮಾತ್ರವಲ್ಲದೇ, ಪ್ರತಿಯೊಬ್ಬ ಸದಸ್ಯರು ಕಾರ್ಯನಿರ್ವಹಿಸಿದರೆ ಸಂಘವು ಸಮಾಜದ ಮುಂಚೂಣಿಗೆ ಬಂದು ಅಭಿವೃದ್ಧಿ ಹೊಂದಲು ಸಾಧ್ಯ. ಜನಾಂಗವು ಸಂಘದಲ್ಲಿ ನೋಂದಣಿಯಾಗುವ ಮೂಲಕ ಮೂಲಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಸಮಾಜದ ಮಕ್ಕಳಿಗೆ ಉತ್ತಮ ವಿದ್ಯೆಯನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜವನ್ನು ಗಟ್ಟಿಗೊಳಿಸಬೇಕು. ಜನಪ್ರತಿನಿಧಿಗಳಿಂದ ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಎಲ್ಲರೂ ಸಂಘದಲ್ಲಿ ನೋಂದಾಯಿಸಿಕೊಳ್ಳಬೇಕು. ಅಲ್ಲದೇ ಗುಡ್ಡಗಾಡು ಪ್ರದೇಶದ ವಾಸ, ನಿವೇಶನ, ವಸತಿ ಸೌಲಭ್ಯವಿಲ್ಲದ ಜನಾಂಗಕ್ಕೆ ಆರ್ಥಿಕವಾಗಿ ಮುನ್ನೆಲೆಗೆ ಬರಲು ಸಂಘದ ಜೊತೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಘಟಕ : ಸತೀಶ್ (ಅಧ್ಯಕ್ಷ), ಸಂದೀಪ್ (ಉಪಾಧ್ಯಕ್ಷ), ಅರುಣ್ (ಕಾರ್ಯದರ್ಶಿ), ಕೃಷ್ಣ (ಸಹ ಕಾರ್ಯದರ್ಶಿ), ವೆಂಕಟೇಶ್ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜಯಾನಂದ್ ಉಪಸ್ಥಿತರರಿದ್ದರು.