ರಾಣಿ ಚನ್ನಮ್ಮರ ಹೋರಾಟ, ಆತ್ಮವಿಶ್ವಾಸ ಮಾದರಿ

28BK2
ಬಸವಕಲ್ಯಾಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಶರಣು ಶರಣಾರ್ಥಿ ಸಮಾವೇಶ, ಕಿತ್ತೂರಿನ ವೀರರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಪೂಜ್ಯ ಸತ್ಯಕ್ಕತಾಯಿ ಮಾತನಾಡಿದರು. ಡಾ.ಸಿದ್ದು ಯಾಪಲಪರವಿ, ಡಾ.ವಿಶ್ವನಾಥಯ್ಯ ಮಂಡಿ, ಜಗನ್ನಾಥ ಖೂಬಾ ಇತರರಿದ್ದರು.
Published on

ಬಸವಕಲ್ಯಾಣ: ಕಿತ್ತೂರು ರಾಣಿ ಚನ್ನಮ್ಮ ಹೋರಾಟ, ಮನೋಭಾವ, ಆತ್ಮವಿಶ್ವಾಸ, ಪರಾಕ್ರಮ ಮಾದರಿಯಾಗಿದೆ ಎಂದು ಗದಗದ ಚಿಂತಕ ಡಾ.ಸಿದ್ದು ಯಾಪಲಪರವಿ ಹೇಳಿದರು.

ನಗರದ ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಭಾನುವಾರ ಸಂಜೆ ಏರ್ಪಡಿಸಿದ್ದ ಶರಣು ಶರಣಾರ್ಥಿ ಸಮಾವೇಶ, ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಅನುಭಾವ ನೀಡಿದ ಅವರು, ಜಗತ್ತಿನ ಇತಿಹಾಸದ ಪುಟಗಳಲ್ಲಿ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದ್ದ ಕಿತ್ತೂರು ರಾಣಿ ಚೆನ್ನಮ್ಮ ಚರಿತ್ರೆ ಸ್ಫೂರ್ತಿದಾಯಕ ಎಂದು ಬಣ್ಣಿಸಿದರು.

ಕಿತ್ತೂರು ಸಣ್ಣ ಸಂಸ್ಥಾನವಾದರೂ ಬಲಾಢ್ಯ ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿತ್ತು. ಸಮಸ್ಯೆ ದೊಡ್ಡದಾದರೂ ಎಂದೆಗುಂದಬಾರದು ಎಂಬುದು ಚನ್ನಮ್ಮ ಹೋರಾಟದ ಬದುಕು ತಿಳಿಸುತ್ತದೆ. ರಾಣಿ ಚನ್ನಮ್ಮ ಅಪ್ಪಟ ಶಿವಯೋಗ ಭಕ್ತೆ. ನಿತ್ಯ ಲಿಂಗಪೂಜೆ ಮಾಡಿ ಅಂಗೈಯಲ್ಲಿನ ಲಿಂಗದಲ್ಲಿ ಪರಮಾತ್ಮನನ್ನು ಕಾಣುತ್ತಿದ್ದಳು. ಖಡ್ಗಕ್ಕೆ ಹೆದರದ ಥ್ಯಾಕರೆ ಶಿವಯೋಗಕ್ಕೆ ಹೆದರಿದ ಎಂದರು.

ನೇತೃತ್ವ ವಹಿಸಿದ್ದ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ವಚನ ಸಾಹಿತ್ಯದ ಸಂರಕ್ಷಣೆಗಾಗಿ ಶರಣರು ಬಲಿದಾನ ನೀಡಿದ್ದಾರೆ. ಕೆಲವರು ಬದುಕಿ ಅಗಲಿರುತ್ತಾರೆ. ಕೆಲವರು ಅಗಲಿ ಬದುಕುತ್ತಾರೆ. ಅವರ ಆದರ್ಶ ಬದುಕು, ಮಾರ್ಗದರ್ಶನ ಎಲ್ಲರೂ ಪಾಲಿಸಬೇಕಿದೆ ಎಂದು ನುಡಿದರು.

ಮಂಡಿ ಆಸ್ಪತ್ರೆ ವೈದ್ಯ ಡಾ.ವಿಶ್ವನಾಥಯ್ಯ ಮಂಡಿ ಉದ್ಘಾಟಿಸಿದರು. ಬಿಡಿಪಿಸಿ ನಿರ್ದೇಶಕ ಜಗನ್ನಾಥ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಸಾಸ್ತೂರದ ಯಶ್ವಂತ ಗಣೇಶಕರ್, ಶಿಕ್ಷಕ ಶಿವಕುಮಾರ ಬಿರಾದಾರ ಮಾತನಾಡಿದರು. ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ್ ಧ್ವಜಾರೋಹಣ ನೆರವೇರಿಸಿದರು. ಶಿವಾನಂದ ಜಂಗೆ, ಶೋಭಾವತಿ ನಿಣ್ಣೆ, ವಿಜಯಲಕ್ಷ್ಮೀ ಮಡಿವಾಳ ಉಪಸ್ಥಿತರಿದ್ದರು.

ಶಿವರಾಜ ನೀಲಕಂಠೆ ಸ್ವಾಗತಿಸಿದರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು. ಗಾಣದ ಕಣ್ಣಪ್ಪ ಮಹಾಶಕ್ತಿ ಕೂಟದ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರೆ, ಮಕ್ಕಳ ಕೂಟದ ಮಕ್ಕಳು ಗುರುಪೂಜೆ ಮಾಡಿದರು. ರಾಣಿ ಚನ್ನಮ್ಮ ಕುರಿತು ಕು.ಶ್ರೀಶೈಲಾ ವೀರಭದ್ರಪ್ಪ ವಡ್ಡೆ ಏಕಾಭಿನಯ ಪಾತ್ರ ಮಾಡಿ ಗಮನ ಸೆಳೆದಳು. ರಂಜನಾ ಭೂಶೆಟ್ಟಿ ಮತ್ತು ಮಂಜುನಾಥ ವಚನ ಸಂಗೀತ ನಡೆಸಿಕೊಟ್ಟರು. ಕಾವೇರಿ ರೇವಣಸಿದ್ಧ ಮಠಪತಿ ಭಕ್ತಿ ದಾಸೋಹ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net