ರಾಣಿ ಚನ್ನಮ್ಮ ಜೀವನ ಮಹಿಳೆಯರಿಗೆ ಸ್ಫೂರ್ತಿ

CTD KITTURU RANI CHANNAMMA
Published on

ಚಿತ್ರದುರ್ಗ:ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಸಾಧ್ವಿ, ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರ ಗುಣ, ಶೌರ್ಯ, ಜೀವನಾದರ್ಶಗಳು ಮಹಿಳೆಯರಿಗೆ ಸ್ಫೂರ್ತಿಯಾಗಿವೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಬುಧವಾರ ಡಿಸಿ ಕಚೇರಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ‌್ಯಕ್ರಮದಲ್ಲಿ ರಾಣಿಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ದೇಶ ಹಾಗೂ ಈ ನಾಡು ಕಂಡಂತಹ ವೀರಾಗ್ರಣಿ ಚನ್ನಮ್ಮ. ತನ್ನ ನಡೆನುಡಿಗಳ ಮೂಲಕ ಸ್ವಾತಂತ್ರ್ಯ, ಸ್ವಾಭಿಮಾನಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ. ಮಕ್ಕಳಲ್ಲಿ ಚನ್ನಮ್ಮನವರ ಧೈರ್ಯ, ಶೌರ್ಯ, ತತ್ವಾದರ್ಶಗಳೆಡೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಎಂತಹುದ್ದೇ ಸಂದರ್ಭದಲ್ಲೂ ಧೃತಿಗೆಡದೆ ದಿಟ್ಟ ಹಾಗೂ ಉತ್ತಮ ಸಂಸ್ಕಾರದೊಂದಿಗೆ ಬದುಕುವುದನ್ನು ಮಕ್ಕಳಿಗೆ ಪಾಲಕರು ಕಲಿಸಬೇಕೆಂದ ಅವರು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಶ್ಲಾಘಿಸಿದರು.

ಭರಮಸಾಗರ ಬಾಪೂಜಿ ಪದವಿಪೂರ್ವ ಕಾಲೇಜು ಪ್ರಾಚಾರ್ಯೆ ಡಾ.ಎನ್. ಮಮತಾ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಅವರ ಧೈರ್ಯ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ಮಹಾನ್ ವ್ಯಕ್ತಿಗಳಿಂದ ನಮ್ಮ ಮಣ್ಣಿನ ಸತ್ವ ನಿಂತಿದೆ. ಮಹನೀಯರ ಜೀವನ ಮೌಲ್ಯ, ತತ್ವಾದರ್ಶ ತಿಳಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.

ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಗೀತಗಾಯನ ಕಾರ‌್ಯಕ್ರಮ ನಡೆಸಿಕೊಟ್ಟರು. ಪಂಚಮಸಾಲಿ ಸಮಾಜದ ಜೆ. ಶಿವಪ್ರಕಾಶ್, ಉಮಾರಮೇಶ್, ಶೈಲಾಕಲ್ಲೇಶ್, ಮೋಕ್ಷಾರುದ್ರಸ್ವಾಮಿ, ಜಿ. ಬಸವರಾಜಪ್ಪ, ಪ್ರಕಾಶ್, ಮಂಜುನಾಥಸ್ವಾಮಿ,ನರೇಂದ್ರಬಾಬು, ವೀರಶೈವ ಸಮಾಜದ ವೀರೇಂದ್ರಕುಮಾರ್, ಎನ್. ತಿಪ್ಪಣ್ಣ, ರೀನಾ ವೀರಭದ್ರಪ್ಪ, ಹೇಮರಡ್ಡಿ ಮಲ್ಲಮ್ಮ ಸಮಾಜದ ಚಿದಾನಂದಪ್ಪ, ಅಕ್ಕನ ಬಳಗದ ಪ್ರೇಮ ಬಾಲಚಂದರ್, ಶಿವಸಿಂಪಿ ಸಮಾಜದ ನಿರ್ದೇಶಕ ಕೊಟ್ರೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net