ರಾಡಿನಿಂದ ಹಲ್ಲೆ ಮಾಡಿ ತಾಯಿ ಹತ್ಯೆ

21ald 1a web
Published on

ಆಲ್ದೂರು: ಹಣಕ್ಕಾಗಿ ಜಗಳ ಮಾಡಿ ಹೆತ್ತ ತಾಯಿಯನ್ನೇ ಕೊಲೆ ಮಾಡಿ ನಂತರ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ನಂಬಿಸಲಯ ಯತ್ನಿಸಿದ ಘಟನೆ ಆಲ್ದೂರು ಹೋಬಳಿಯ ಹಚ್ಚಡ ಗ್ರಾಮದಲ್ಲಿ ಸಂಭವಿಸಿದ್ದು, ಸಂಬಂಧಿಕರ ದೂರಿನಿಂದ ಘಟನೆ ಬೆಳಕಿಗೆ ಬಂದಿದೆ. ತಾಯಿಯನ್ನು ಹತ್ಯೆ ಮಾಡಿದ ಆರೋಪಿ ಬಸವರಾಜು (26) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ಮುಚ್ಚಿ ಹಾಕಲು ಸಹಕರಿಸಿದ ಆರೋಪದ ಮೇಲೆ ಗ್ರಾಮದ 14 ಜನರ ವಿರುದ್ಧ ದೂರು ದಾಖಲಾಗಿದೆ. ಹಚ್ಚಡಮನೆ ಗ್ರಾಮದ ಲತಾ (56) ಮತ್ತು ಅವರ ಪುತ್ರ ಬಸವರಾಜು (26) ಅವರ ನಡುವೆ ಜು. 18ರಂದು ಮಧ್ಯಾಹ್ನ ಹಣದ ವಿಚಾರಕ್ಕೆ ಜಗಳ ನಡೆದಿದೆ. ಆಗ ಬಸವರಾಜು ತಾಯಿಯ ತಲೆಗೆ ಊದುವ ಕೊಳವೆಯಿಂದ ಹೊಡೆದಿದ್ದಾನೆ. ಸಂಜೆ ಮತ್ತೆ ಮನೆಗೆ ಬಂದು ಕುಡಿಯಲು ಹಣ ಕೇಳಿದ್ದು, ಮತ್ತೆ ಜಗಳ ಆಗಿದೆ. ಆಗ ರಾಡ್​ನಿಂದ ಲತಾ ಅವರ ಮೇಲೆ ಹಲ್ಲೆ ಮಾಡಿದ್ದು, ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ಮುಚ್ಚಿ ಹಾಕಲು ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ನಂಬಿಸಲು ಡೀಸೆಲ್ ಸುರಿದು ಮನೆಯಲ್ಲೇ ತಾಯಿಗೆ ಬೆಂಕಿ ಹಚ್ಚಿದ್ದಾನೆ. ಅರೆಬರೆ ಸುಟ್ಟ ಶವವನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ಪೂರ್ಣ ಸುಟ್ಟು ಹಾಕಲಾಗಿದೆ. ಗ್ರಾಮದ ಕೆಲವರಿಗೆ ಈ ವಿಷಯ ತಿಳಿದಿದ್ದರೂ ಅವರು ಪೊಲೀಸರಿಗೆ ಮಾಹಿತಿ ನೀಡದೆ ತಾಯಿ ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂಬ ಮಗನ ನಾಟಕಕ್ಕೆ ಸಹಕಾರ ನೀಡಿ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಂಬಂಧಿಕರು ಘಟನೆಯ ವಸ್ತುಸ್ಥಿತಿ ವಿವರಿಸಿ ಆಲ್ದೂರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಆರೋಪಿ ಬಸವರಾಜುನನ್ನು ಬೇಲೂರು ಸಮೀಪದ ಅವರ ಸಂಬಂಧಿಕರ ಮನೆಯಲ್ಲಿ ಬಂಧಿಸಿದ್ದಾರೆ. ಸಾಕ್ಷ್ಯಾಶಪಡಿಸಲು ಸಹಕರಿಸಿದ ಕಾರಣಕ್ಕೆ ಗ್ರಾಮದ 14 ಜನರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ.  ಹಚ್ಚಡಮನೆ ಗ್ರಾಮದ ಪಾಪಣ್ಣ, ಚಂದ್ರ, ಮೂರ್ತಣ್ಣ, ಕೋಗಿಲೆಮನೆ ಗ್ರಾಮದ ಚಂದ್ರಮ್ಮ, ಮಾಡ್ಗಲ್ ಗ್ರಾಮದ ಚೆನ್ನಿ, ಮಾಣಿಮಕ್ಕಿ ಗ್ರಾಮದ ವೆಂಕಟೇಶ್, ಮಹೇಶ್, ಕುಮಾರ್, ಗಣೇಶ್, ನಿಶಾಂತ್, ವಿಶ್ವ, ರಮೇಶ್ ಎಂಬುವರ ವಿರುದ್ಧ ಕೊಲೆ ಸಾಕ್ಷ್ಯ ನಾಶಪಡಿಸಲು ಸಹಕರಿಸಿದ ಆರೋಪ ಮೇಲೆ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net