

ಎನ್.ಆರ್.ಪುರ: ಕನ್ನಡ ರಾಜ್ಯೋತ್ಸವದಂದು ಬೆಳಗ್ಗೆ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಕುವೆಂಪು ರಂಗಮಂದಿರವರೆಗೂ ಮೆರವಣಿಗೆ ನಡೆಸಲಾಗುವುದು ಎಂದು ತಹಸೀಲ್ದಾರ್ ಡಾ. ನೂರುಲ್ ಹುದಾ ತಿಳಿಸಿದರು.
ಮಂಗಳವಾರ ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮೆರವಣಿಗೆಯಲ್ಲಿ ಚಿಕ್ಕ ಮಕ್ಕಳು ಭಾಗವಹಿಸುವುದು ಬೇಡ. 6ನೇ ತರಗತಿ ನಂತರದ ಮಕ್ಕಳು ಭಾಗವಹಿಸಲಿ. ಪೊಲೀಸ್, ಹೋಂ ಗಾರ್ಡ್ಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಪೌರ ಕಾರ್ಮಿಕರು, ಮೆಸ್ಕಾಂ, ಅರಣ್ಯ ಇಲಾಖೆ ಸಿಬ್ಬಂದಿ ಸಮವಸ್ತ್ರದಲ್ಲಿ ಬರಬೇಕು. ಶಿಷ್ಟಾಚಾರದಂತೆ ವೇದಿಕೆಗೆ ಅತಿಥಿಗಳನ್ನು ಕರೆತರಲಾಗುವುದು. ಸಂಘ, ಸಂಸ್ಥೆಗಳ ಪದಾಧಿಕಾರಿಗಳಿಗೆ ಪಕ್ಕದಲ್ಲಿ ಇನ್ನೊಂದು ಆಸನದ ವ್ಯವಸ್ಥೆ ಮಾಡಲಾಗುವುದು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾಗುವುವರೆಗೂ ಎಲ್ಲರೂ ಹಾಜರಿರಬೇಕು ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಬೇಕು. ಮೆರವಣಿಗೆಯಲ್ಲಿ ಕಸಾಪದಿಂದ 101 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡ ಸ್ವಾಮಿ ಮಾತನಾಡಿ, ಕುವೆಂಪು ಬರೆದ ನಾಡಗೀತೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ 100 ಮಹಿಳೆಯರು ಸೇರಿ ನಾಡಗೀತೆ ಹಾಡಿದರೆ ಸೂಕ್ತವಾಗಲಿದೆ ಎಂದು ಸಲಹೆ ನೀಡಿದರು. ತಾಲೂಕು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಹರ್ಷ ಮಾತನಾಡಿ, ಮಕ್ಕಳು ಬಿಸಿಲಿನಲ್ಲಿ ಇರುವುದರಿಂದ ಅತಿಥಿಗಳ ಭಾಷಣ ಮಿತಿಗೊಳಿಸಬೇಕು ಎಂದು ಸಲಹೆ ನೀಡಿದರು.
ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ನಾಯ್ಕ, ಶಿರಸ್ತೇದಾರ್ ವೇಣುಗೋಪಾಲ್, ಪೊಲೀಸ್ ಠಾಣಾಧಿಕಾರಿ ನಿರಂಜನ ಗೌಡ, ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್, ಡಿಎಸ್‌ಎಸ್ ಮುಖಂಡರಾದ ಶಿವಣ್ಣ, ವಾಲ್ಮೀಕಿ ಶ್ರೀನಿವಾಸ್, ಡಿ.ರಾಮು ಇದ್ದರು.