

23ಕ್ಕೆ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ ತಹಸೀಲ್ದಾರ್ ಶ್ರೀಶೈಲ ತಳವಾರ್ ಮಾಹಿತಿ
ಯಲಬುರ್ಗಾ: ಸರ್ಕಾರದ ಮಾರ್ಗಸೂಚಿಯಂತೆ ಸರಳ ಮತ್ತು ಅಚ್ಚುಕಟ್ಟಾಗಿ ಕಿತ್ತೂರು ಚನ್ನಮ್ಮ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ್ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ಚನ್ನಮ್ಮ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅ.23ರಂದು ಬೆಳಗ್ಗೆ 9.30ಕ್ಕೆ ಚನ್ನಮ್ಮ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾಲಾರ್ಪಣೆ ಮಾಡುವರು. ಈ ಬಾರಿ ಮೆರವಣಿಗೆ ಇರುವುದಿಲ್ಲ. ಅಧಿಕಾರಿಗಳು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ಸೂಚಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಜಿಲ್ಲಾ ಉಪಾಧ್ಯಕ್ಷ ವೀರಣ್ಣ ಹುಬ್ಬಳ್ಳಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕುರಿತು ಸಮಾಜಕ್ಕೆ ಸಂದೇಶ ನೀಡಲು ಜಯಂತಿಗಳ ಆಚರಣೆ ಅವಶ್ಯವಿದೆ. ಸರಳ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ರಾಜ್ಯೋತ್ಸವ: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಸ.ಪ.ಪೂ. ಕಾಲೇಜಿನ ರಂಗಮಂದಿರದಲ್ಲಿ ನ.1ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸಲಾಗುವುದು. ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಜತೆಗೆ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸ್, ಗ್ರಾಮ ಸಹಾಯಕ, ತಾಪಂ ಸಿಬ್ಬಂದಿ, ಜೆಸ್ಕಾಂ ಹಾಗೂ ಕನ್ನಡದಲ್ಲಿ ಉತ್ತಮ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಕೆ.ಜಿ.ಪಲ್ಲೇದ, ಕನ್ನಡಪರ ಹೋರಾಟಗಾರರಾದ ರಾಜಶೇಖರ, ಶಿವಕುಮಾರ ನಾಗಗೌಡ್ರ, ಸ.ಶರಣಪ್ಪ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಪಪಂ ಸದಸ್ಯ ಹನುಮಂತ ಭಜಂತ್ರಿ, ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ, ಅಧಿಕಾರಿಗಳಾದ ನಿಂಗಣ್ಣ ಬಿರಾದಾರ, ಮಂಜುನಾಥ ಲಿಂಗಣ್ಣವರ್, ಸಂಜಯ್ ಚಿತ್ರಗಾರ, ಶರಣಪ್ಪ ಕೊಪ್ಪದ, ಮಹಾಂತೇಶ, ಅಮರೇಶರಡ್ಡಿ ಇತರರಿದ್ದರು.