

ಹೊಳೆನರಸೀಪುರ: ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಪಟ್ಟಣದ ತಾಪಂ ಕಚೇರಿಯಲ್ಲಿ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಸೋಮವಾರ ಪೂರ್ವಭಾವಿ ಸಭೆ ನಡೆಸಿದರು.
ರಾಜ್ಯೋತ್ಸವ ದಿನದಂದು ಬೆಳಗ್ಗೆ 8 ಗಂಟೆಗೆ ಚೆನ್ನಾಂಬಿಕ ವೃತ್ತದಿಂದ ಅಲಂಕೃತ ವಾಹನದಲ್ಲಿ ಭುವನೇಶ್ವರಿ ಭಾವಚಿತ್ರವನ್ನು ವಿದ್ಯಾರ್ಥಿಗಳ ಪಥಸಂಚಲನ, ಬ್ಯಾಂಟ್ ಸೆಟ್ ಮೂಲಕ ಬಯಲು ಮಂದಿರದ ವೇದಿಕೆಗೆ ಕರೆ ತರುವುದು. ಅಲ್ಲಿ ಶಾಸಕ ಎಚ್.ಡಿ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಧಾನ ಭಾಷಣ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಮಾಡಲಾಗುವುದು ಎಂದರು.
ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಆಹಾರ ಇಲಾಖೆಯವರು ರಾಜ್ಯೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ರಾಜ್ಯೋತ್ಸವ ದಿನದಂದು ಸ್ವಚ್ಛತೆ, ಮೆರವಣಿಗೆ ವಾಹನ ಸಿದ್ಧಪಡಿಸುವ ಜವಾಬ್ದಾರಿಯನ್ನು ಪುರಸಭೆಗೆ, ಭದ್ರತೆ ಜವಾಬ್ದಾರಿಯನ್ನು ಪೊಲೀಸರಿಗೆ, ದ್ವಜಾರೋಹಣ ವ್ಯವಸ್ಥೆಯ ಉಸ್ತುವಾರಿಯನ್ನು ಅಗ್ನಿ ಶಾಮಕ ಇಲಾಖೆಗೆ ನೀಡಲಾಯಿತು.
ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ಬಿಇಒ ಸೋಮಲಿಂಗೇಗೌಡ, ತಾಪಂ ತಾಂತ್ರಿಕ ಅಧಿಕಾರಿ ಗೋಪಾಲ್, ಕ್ರೀಡಾ ಶಿಕ್ಷಣ ಶಿಕ್ಷಕ ಸುಜತ್ ಅಲಿ, ಕರ್ನಾಟಕ ರಕ್ಷಣಾ ವೇದಿಕೆಯ ಓಹಿಲೇಶ್, ಎಚ್.ಎಸ್. ಪುಟ್ಟಸೋಮಪ್ಪ, ಪ್ರಾಂಶುಪಾಲ ದೇವರಾಜ್, ಹಿಂದುಳಿದ ವರ್ಗಗಳ ಇಲಾಖೆಯ ಹರೀಶ್, ಕೃಷಿ ಅಧಿಕಾರಿ ಸಪ್ನಾ, ತಾಲೂಕು ಕಸಾಪ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಕುಮುದಾ, ಪೊಲೀಸ್ ಇಲಾಖೆಯ ಬಸವರಾಜು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು, ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.