

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಅಮೃತ್‌ಆತ್ರೇಶ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡಪರ ಸಂಘಟನೆಗಳು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಗರದ ಮುಖ್ಯ ರಸ್ತೆಯಲ್ಲಿ ಬೆಳ್ಳಿರಥದೊಂದಿಗೆ ಭುವನೇಶ್ವರಿ ದೇವಿ ಮೆರವಣಿಗೆ, ಸಾಧಕರಿಗೆ ಸನ್ಮಾನ, ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು. ಜತೆಗೆ ಈ ಬಾರಿ ವಿಶೇಷವಾಗಿ ಸಂಪನ್ಮೂಲ ವ್ಯಕ್ತಿಯಿಂದ ಕನ್ನಡ ರಾಜ್ಯೋತ್ಸವ ಕುರಿತು ಭಾಷಣ ಮಾಡಿಸಲಾಗುವುದು ಎಂದರು.
ವಾಲ್ಮೀಕಿ ಸಂಘ ಅಧ್ಯಕ್ಷ ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ವಾಣಿ, ಶಿಶು ಯೋಜನಾಧಿಕಾರಿ ನಾಗೇಶ್, ಕಾರ್ಮಿಕ ನಿರೀಕ್ಷಕಿ ನಾಗರತ್ನಾ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಮೃತಾ, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ನಯನಾ, ಮುಖಂಡರಾದ ಕೇಶವಮೂರ್ತಿ, ರಾಜಮ್ಮಪ್ರಕಾಶ್, ನಾಗರಾಜು, ಗಂಗಾಧರ್ ಇದ್ದರು.
ಪ್ರಶಸ್ತಿಗೆ ಅರ್ಜಿ: ತಾಲೂಕಿನಲ್ಲಿ ಕನ್ನಡ ಸೇವೆ ಸಲ್ಲಿಸಿದ್ದ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲು ನಿರ್ಧರಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಅ.29ರ ಒಳಗಾಗಿ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಬಳಿಕ 7 ಜನರನ್ನು ಒಳಗೊಂಡ ಆಯ್ಕೆ ಸಮಿತಿ ಅಂತಿಮವಾಗಿ ಸಾಧಕರನ್ನು ಆಯ್ಕೆ ಮಾಡಲಿದೆ ಎಂದು ತಹಸೀಲ್ದಾರ್ ಅಮೃತ್‌ಆತ್ರೇಶ್ ಮಾಹಿತಿ ನೀಡಿದರು.
ಅಧಿಕಾರಿಗಳಿಗೆ ನೋಟಿಸ್: ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಸಾಕಷ್ಟು ಇಲಾಖೆಯ ಅಧಿಕಾರಿಗಳು ಗೈರಾಗಿದ್ದು, ತಾಲೂಕು ಆಡಳಿತದಿಂದ ಇಲಾಖೆ ಮೇಲಾಧಿಕಾರಿಗಳಿಗೆ ಶಿಸ್ತು ಕ್ರಮಕ್ಕಾಗಿ ನೋಟಿಸ್ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಸಭೆಯಲ್ಲಿ ಚರ್ಚೆಯಾದ ವಿಷಯ: ರಾಜ್ಯೋತ್ಸವಕ್ಕೆ ತಾಲೂಕುಮಟ್ಟದ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಸಾಧಕರ ಪಟ್ಟಿಯನ್ನು ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕವಾಗಿ ಪ್ರಕಟಿಸಬೇಕು. ನಗರ ಸೇರಿ ತಾಲೂಕಿನಾದ್ಯಂತ ಪ್ರತಿಯೊಂದು ಅಂಗಡಿ, ಮನೆ, ಕಚೇರಿಯ ಮನೆಯಲ್ಲಿ ನಾಡ ಬಾವುಟವನ್ನು ಕಡ್ಡಾಯವಾಗಿ ಹಾರಿಸುವಂತೆ ಸುತೋಲೆ ಹೊರಡಿಸಬೇಕು. ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಷಯವಾಗಿ ಸಭೆಯಲ್ಲಿ ಚರ್ಚಿಸಲಾಯಿತು.