

ಬೀದರ್: ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಪ್ರತಿ ವರ್ಷದಂತೆ ಈಗಲೂ ರಾಜ್ಯೋತ್ಸವವನ್ನು ಎಲ್ಲರೂ ಸೇರಿ ಸಂಭ್ರಮದಿಂದ ನಡೆಸಬೇಕು. ಬೆಳಗ್ಗೆ 7.30ಕ್ಕೆ ಎಲ್ಲ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು. 8ಕ್ಕೆ ನಗರದ ಬಸವೇಶ್ವರ ವೃತ್ತದಿಂದ ನೆಹರು ಕ್ರೀಡಾಂಗಣವರೆಗೆ ಮೆರವಣಿಗೆ ನಡೆದ ಬಳಿಕ 9ಕ್ಕೆ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ರಾಜ್ಯೋತ್ಸವ ನಿಮಿತ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ ಸ್ಪರ್ಧೆ ಇತರ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿವಿಧ ಕ್ಷೇತ್ರದ 10 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಗೆ ಸಾಧಕರನ್ನು ಗುರುತಿಸಲು ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು ಎಂದರು.ನೆಹರು ಕ್ರೀಡಾಂಗಣ ಕಾರ್ಯಕ್ರಮದಲ್ಲಿ ಆರೋಗ್ಯ, ತೋಟಗಾರಿಕೆ, ಕೃಷಿ, ರೇಷ್ಮೆ, ಕೈಗಾರಿಕೆ ಇತರ ಇಲಾಖೆಗಳ ಸ್ತಬ್ಧಚಿತ್ರ ಪ್ರದರ್ಶನ ಇರಲಿದೆ. ಸಂಜೆ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಬೇಕು ಎಂದು ಅಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಶಿಲ್ಪಾ ಎಂ. ಎಸ್ಪಿ ಡೆಕ್ಕಾ ಕಿಶೋರಬಾಬು, ಎಸಿ ಮಹ್ಮದ್ ನಯೀಮ್ ಮೋಮಿನ್, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಪ್ರಮುಖರಾದ ಡಾ.ಜಗನ್ನಾಥ ಹೆಬ್ಬಾಳೆ, ವಿರೂಪಾಕ್ಷ ಗಾದಗಿ, ವಿಜಯಕುಮಾರ ಸೋನಾರೆ, ಎಂ.ಎಸ್. ಮನೋಹರ ಇತರರಿದ್ದರು.