ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ: ಸಿ.ಟಿ.ರವಿ

RAVI
Published on

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ. ಆದರೆ ಪಕ್ಷ ಯಾವುದೇ ಹುದ್ದೆ ಕೊಟ್ಟರೂ ಕೆಲಸ ಮಾಡುತ್ತೇನೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದ ನಾನು ಪಕ್ಷದ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಂಡೆ. ನನ್ನ ಹೆಸರನ್ನು ಎಲ್ಲದಕ್ಕೂ ತೂರಿಸಲಾಗುತ್ತದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೂ ನನ್ನ ಹೆಸರು ಪ್ರಸ್ತಾಪಿಸಲಾಗುತ್ತಿದೆ. ಸದ್ಯ ವಿರೋಧ ಪಕ್ಷದ ರೇಸ್‌ನಲ್ಲಿದ್ದಾರೆ ಎನ್ನುವುದನ್ನು ತೋರಿಸಿಲ್ಲ. ಏನೇ ಆದರೂ ನಾನು ಪಕ್ಷ ಬಯಸಿದ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೂ ನಿಭಾಯಿಸುವ ಇಂಗಿತ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳನ್ನೂ ಗೆಲ್ಲಲು ಅಗತ್ಯವಿರುವ ಯೋಚನೆ ಮಾಡುತ್ತೇವೆ. ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಮುಂದಿನ ಅವಧಿಗೆ ಭಾರತ ವಿಶ್ವದ ಮೂರನೇ ಶಕ್ತಿಯಾಗಿ ಬೆಳೆಯಬೇಕು ಎಂಬುದು ಮೋದಿ ಅವರ ಆಶಯ ಎಂದರು.
ಕಾಂಗ್ರೆಸ್ 135 ಸ್ಥಾನ ಗೆದ್ದಿದ್ದರೂ ರಾಜ್ಯ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿರುವುದರಿಂದ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಿಗೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾವಾರು ಸಚಿವರು, ಶಾಸಕರ ಸಭೆ ನಡೆಸುವ ಮೂಲಕ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿದರು.
ನಮ್ಮ ಪಕ್ಷದ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಸರ್ಕಾರ ಆರು ತಿಂಗಳು ಇರುವುದಿಲ್ಲ ಎಂದಿದ್ದರು. ಹೀಗಾಗಿ ಅದು ನಿಜವಾಗುತ್ತಿರುವುದರಿಂದ ಕಾಂಗ್ರೆಸ್‌ನವರು ಭಯಗೊಂಡಿದ್ದಾರೆ. ಪರಿಣಾಮ, ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಆದರೆ ದೂರಾಲೋಚನೆ ಇರುವ ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಶಾಸಕರ ಜತೆಗೂ ಮಾತನಾಡುತ್ತೇನೆ. ಯಾರೂ ಅಷ್ಟು ಸುಲಭವಾಗಿ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದರು.
ಸರ್ಕಾರ ಬಂದಾಗಿನಿಂದ ಕಾಂಗ್ರೆಸ್‌ನ ಹಿರಿಯ ಶಾಸಕರಿಗೆ ಸಮಾಧಾನ ಇಲ್ಲ. ಇನ್ನು ಇಲ್ಲಿಂದ ಹೋದವರಿಗೆ ಏನು ಸಮಾಧಾನ ಸಿಗುತ್ತದೆ? ಎಸ್.ಟಿ.ಸೋಮಶೇಖರ್ ಅವರ ಜತೆ ಮಾತನಾಡುತ್ತೇನೆ. ಅವರ ಭಾವನೆ ಏನಿದೆ ಎಂಬುದನ್ನು ತಿಳಿದುಕೊಂಡು ಉಳಿದವರ ಜತೆಯೂ ಮಾತನಾಡುತ್ತೇನೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್‌ನವರನ್ನು ನಿರ್ಲಕ್ಷೃ ಮಾಡಲ್ಲ. ಹಾಗೆ ಮಾಡಿದ ಪರಿಣಾಮ ಅಧಿಕಾರ ಕಳೆದುಕೊಂಡೆವು. ಅವರ ಗ್ಯಾರಂಟಿ ಚರ್ಚೆಗೆ ಕೌಂಟರ್ ಮಾಡಲಿಲ್ಲ. ಪೇಸಿಎಂ ಎಂದು ಹೇಳಿದಾಗ ಕ್ರಮ ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮ ಅನುಭವಿಸುತ್ತಿದ್ದೇವೆ ಎಂದರು.
ಬಿಜೆಪಿ ಸೋತಿರುವುದಕ್ಕೆ ಇನ್ನೊಬ್ಬರ ಕಡೆ ಬೊಟ್ಟು ಮಾಡುತ್ತಿಲ್ಲ. ನಾವು ಸೋತಿರುವುದಕ್ಕೆ ತಪ್ಪು ನಮ್ಮದೂ ಇದೆ. ಅದನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net