

ಚಿತ್ರದುರ್ಗ: ಬೆಂಗಳೂರು ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.
ಈ ಘಟನೆ ನಾಗರಿಕರಲ್ಲಿ ಯಾವುದೇ ರೀತಿ ಆತಂಕಕ್ಕೆ ಕಾರಣವಾಗಬಾರದೆಂದು, ಜನರಲ್ಲಿ ವಿಶ್ವಾಸ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲ ನಗರಗಳು ಸೇರಿ ರಾಜ್ಯದ ಜಲಾಶಯ, ಪ್ರವಾಸಿತಾಣ, ಕೋರ್ಟ್- ಕಚೇರಿಗಳು, ಬಸ್, ರೈಲು, ವಿಮಾನ ನಿಲ್ದಾಣಗಳು, ಬಂದರು, ಆಸ್ಪತ್ರೆ ಮೊದಲಾದೆಡೆ ಶ್ವಾನದಳದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರ ಸೂಚನೆಯಂತೆ ಸ್ಫೋಟಕ ಪತ್ತೆ ಶ್ವಾನಗಳೊಂದಿಗೆ ಕಾರ್ಯಾರಣೆಗೆ ಇಳಿದಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆ ಮುನ್ನ ಜನಸಂದಣಿ ಇರುವ ಹೋಟೆಲ್‌ನಲ್ಲಾದ ಬಾಂಬ್ ಸ್ಫೋಟ ಸಹಜವಾಗಿಯೇ ಜನರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಕಟ್ಟುನಿಟ್ಟಿನಿಂದ ಪರಿಶೀಲನೆ ನಡೆಸಲು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಡಿಜಿಪಿ ಅಲೋಕ್ ಮೋಹನ್ ನಿರ್ದೇಶಿಸಿದ್ದಾರೆ.
ಚಿತ್ರದುರ್ಗದಲ್ಲಿ ಸೋಮವಾರ ರೈಲ್ವೇ ಸ್ಟೇಷನ್, ಬಸ್ ನಿಲ್ದಾಣ, ಕೋರ್ಟ್, ಕೋಟೆ ಮೊದಲಾದೆಡೆ ಚೆಕ್ಕಿಂಗ್ ನಡೆಯಿತು. ತಾಲೂಕು ಕೇಂದ್ರಗಳಲ್ಲೂ ಕನಿಷ್ಠ ವಾರಕ್ಕೆ ಒಂದೆರೆಡು ಬಾರಿಯಾದರೂ ಪರಿಶೀಲನೆ ನಡೆಸಲಾಗುತ್ತದೆ. ಈ ಮೊದಲು ಕೂಡ ಕೋರ್ಟ್,ನಿಲ್ದಾಣ, ಐತಿಹಾಸಿಕ ತಾಣ, ಜಲಾಶಯಗಳು ಮತ್ತಿತರ ಜನದಟ್ಟಣೆ ಸ್ಥಳಗಳಲ್ಲಿ ಚೆಕ್ಕಿಂಗ್ ನಡೆಯುತ್ತಿದ್ದು, ಈ ಕಾರ್ಯಕ್ಕೆ ಚುರುಕು ನೀಡಲಾಗಿದೆ ಎಂಬುದು ಶ್ವಾನದಳದ ಅಧಿಕಾರಿಯೊಬ್ಬರ ಅನಿಸಿಕೆ.
ಸದ್ಯ ಚಿತ್ರದುರ್ಗದ ಪೊಲೀಸ್ ಶ್ವಾನದಳದಲ್ಲಿ 3 ಅಪರಾಧ ಹಾಗೂ 3 ಸ್ಫೋಟಕ ಪತ್ತೆ ಶ್ವಾನಗಳಿವೆ. ಐದಾರು ತಿಂಗಳ ಮರಿಯೊಂದಕ್ಕೆ ತರಬೇತಿ ನೀಡಲಾಗುತ್ತಿದೆ.
*ವಾಟ್ಸ್‌ಆ್ಯಪ್ ಗ್ರೂಫ್:
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷಕ್ಕೆ ಕಾರಣವಾಗುವಂಥ ಸಂದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿ ಮತ್ತು ಆಯಾ ಠಾಣೆಗಳಲ್ಲಿರುವ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ಗಳು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತಿವೆ.
ಸಂಘರ್ಷಕ್ಕೆ ಕಾರಣವಾಗುವಂಥ ಸಂದೇಶಗಳಿದ್ದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗುತ್ತದೆ ಹಾಗೂ ಇಂಥ ಸಂದೇಶಗಳು ಯಾವುದೇ ಜಿಲ್ಲೆಯ ಪೊಲೀಸರು ಗಮನಕ್ಕೆ ಬಂದರೂ, ಕೂಡಲೇ ಉನ್ನತ ಅಧಿಕಾರಿಗಳಿಂದ ಹಿಡಿದು ಇಲಾಖೆ ವಿವಿಧ ದರ್ಜೆಯ ಅಧಿಕಾರಿಗಳನ್ನು ಒಳಗೊಂಡಿರುವ ವಾಟ್ಸ್‌ಆ್ಯಪ್ ಗ್ರೂಫ್‌ನಲ್ಲಿ ಅಲರ್ಟ್ ಮಾಡಲಾಗುತ್ತದೆ.
ಇನ್ನು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಡಿಸಿ ಕಚೇರಿಗಳಲ್ಲೂ ಕಾರ‌್ಯಾರಂಭಿಸಲಿರುವ ನೀತಿಸಂಹಿತೆ ಮಾನಿಟರಿಂಗ್ ಸೆಲ್‌ಗಳು ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಲಿವೆ ಎನ್ನುತ್ತಾರೆ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಯೊಬ್ಬರು.
*ಕೋಟ್
ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ, ಜನಸಂದಣಿ ಸ್ಥಳಗಳಲ್ಲಿ ತಪಾಸಣೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರು ನಿರ್ದೇಶಿಸಿದ್ದಾರೆ. ಶ್ವಾನದಳ ಪೊಲೀಸರು ನಗರದಲ್ಲಿ ವಿವಿಧೆಡೆ ಈಗಾಗಲೇ ತಪಾಸಣೆ ಕಾರ‌್ಯವನ್ನು ಆರಂಭಿಸಿದ್ದಾರೆ.
ಧರ್ಮೇಂದರ್‌ಕುಮಾರ್‌ಮೀನಾ, ಎಸ್‌ಪಿ, ಚಿತ್ರದುರ್ಗ