ರಾಜ್ಯಾದ್ಯಂತ ರೈತರ ಹರತಾಳ 18ರಂದು

CTD29 H.R.BASAVARAJAPPA
Published on

ಚಿತ್ರದುರ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ನಂಬರ್ ಜೋಡಣೆ ಕೈ ಬಿಡಬೇಕು, ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 18ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ರಾಜ್ಯರೈತ ಸಂಘದ, ಹಸಿರು ಸೇನೆ ರಾಜ್ಯ ಸಮಿತಿ ಸಭೆ ನಿರ್ಧರಿಸಿದೆ.
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಗಳನ್ನು ಒತ್ತಾಯಿಸಿ ನಗರದ ರೈತ ಭವನದಲ್ಲಿ ರಾಜ್ಯರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಅಧ್ಯಕ್ಷತೆ ಆಯೋಜಿಸಿದ್ದ ಸಭೆ ಹೋರಾಟ ನಡೆಸಲು ತೀರ್ಮಾನಿಸಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ಆಧಾರ್ ನಂಬರ್ ಜೋಡಿಸಬಾರದು. ಬ್ಯಾಂಕ್‌ಗಳು ಎನ್‌ಒಸಿಗೆ ಶುಲ್ಕ ಹಾಗೂ ಸಾಲ ವಸೂಲಿಗೆ ಒತ್ತಡ ಹಾಕಬಾರದು. ಜಮೀನು ದಾರಿ ಸಮಸ್ಯೆ ಬಗೆಹರಿಸಬೇಕು. ಬೆಳೆ ಪರಿಹಾರ ತಾರತಮ್ಯ ನಿವಾರಿಸಬೇಕು. ಬೆಳೆವಿಮೆ ಪರಿಹಾರ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಸರಿಪಡಿಸಬೇಕು.
ಸಾಂಕೇತಿಕ ಬೆಲೆಯಲ್ಲಿ ಪಹಣಿ ಮತ್ತು ಭೂ ದಾಖಲೆಗಳನ್ನು ಒದಗಿಸಬೇಕು. ಭೂಮಿ ದಾಖಲೆಗಳು ಕಂಪ್ಯೂಟಕೀಕರಣ ವೇಳೆ ಆಗುವ ತಪ್ಪುಗಳಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಯನ್ನು ಹೊಣೆ ಮಾಡಬೇಕು. ಖಾಸಗಿ ಶಾಲೆ-ಕಾಲೇಜುಗಳು ಶುಲ್ಕದಲ್ಲಿ ಕಡ್ಡಾಯವಾಗಿ ಸರ್ಕಾರದ ನಿಯಮ ಪಾಲಿಸ ಬೇಕು ಮತ್ತು ಅವಧಿಕೃತವಾಗಿ ಪಡೆದ ಶುಲ್ಕವನ್ನು ಮರು ಪಾವತಿಸಬೇಕು.
ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳ ಚಿಕಿತ್ಸೆ ಸಂಪೂರ್ಣ ವೆಚ್ಚ ಮಾನವೀಯ ನೆಲಗಟ್ಟಿನಲ್ಲಿ ನಿರ್ಧರಿಸಬೇಕು. ಜಮೀನು, ತೋಟಗಳಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಬಗರ್ ಹುಕ್ಕು ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಬೆಳೆಗಳಿಗೆ ಬೆಲೆ ಆಯೋಗಗಳ ಪ್ರಕಾರ ಲಾಭಾಂಶ ಬೆಲೆ ನೀತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಕುರುವ ಗಣೇಶ್, ಅಮೀನ್‌ಪಾಷಾ, ನಜೀರ್‌ಸಾಬ್ ಮೂಲೆಮನಿ, ಮಹೇಶ್ ತರೀಕೆರೆ, ನಿಂಗಪ್ಪ ದಿವಿಟ್ಟಿಗಿ, ಹೊನ್ನೂರು ಮುನಿಯಪ್ಪ, ಭರಮಣ್ಣ, ಮಲ್ಲಿಕಾರ್ಜುನ್ ರಾಂದುರ್ಗ, ಕಬ್ಬಿಗೆರೆ ನಾಗರಾಜ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ನಿಜಲಿಂಗಪ್ಪ, ರಾಮರೆಡ್ಡಿ, ಸದಾಶಿವಪ್ಪ, ಮಂಜುನಾಥ್, ಕೆ.ಟಿ.ತಿಪ್ಪೇಸ್ವಾಮಿ, ಬೋರೇಶ್, ರಂಗಸ್ವಾಮಿ, ರವಿ, ಸತೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net