ರಾಜ್ಯಾದ್ಯಂತ ಜೆಡಿಎಸ್‌ಗೆ ದಸಂಸ ಬೆಂಬಲ: ರಾಜ್ಯಾಧ್ಯಕ್ಷ ಡಾ.ಆರ್.ಅಶ್ವಥ್ ನಾರಾಯಣ್ ಹೇಳಿಕೆ

ರಾಜ್ಯಾದ್ಯಂತ ಜೆಡಿಎಸ್‌ಗೆ ದಸಂಸ ಬೆಂಬಲ: ರಾಜ್ಯಾಧ್ಯಕ್ಷ ಡಾ.ಆರ್.ಅಶ್ವಥ್ ನಾರಾಯಣ್ ಹೇಳಿಕೆ
Published on

ಹಾಸನ: ಜನತಾ ಪರಿವಾರದಿಂದಲೂ ಎಚ್.ಡಿ.ದೇವೇಗೌಡರು ದಲಿತ ಚಳವಳಿ ನಾಯಕರಿಗೆ ಆದ್ಯತೆ ನೀಡುತ್ತಾ ಬಂದಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ರಾಜ್ಯಾದ್ಯಂತ ಜೆಡಿಎಸ್‌ಗೆ ಬೆಂಬಲ ನೀಡಲಾಗುವುದು ಎಂದು ಕರ್ನಾಟಕ ದಸಂಸ ರಾಜ್ಯಾಧ್ಯಕ್ಷ ಡಾ.ಆರ್.ಅಶ್ವಥ್ ನಾರಾಯಣ್ ತಿಳಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಖಾಸಗೀಕರಣ, ಜಾಗತೀಕರಣ, ಉದಾರೀಕರಣ, ಬೆಲೆ ಏರಿಕೆ ತಡೆಯುವಲ್ಲಿ ವಿಫಲವಾಗಿವೆ. ಬಿಜಪಿ ಸಂವಿಧಾನದ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸಿದೆ. ಹೀಗಾಗಿ ನಾವು ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್-ಬಿಜೆಪಿಗೆ ಬಿದ್ದ ಮತ ಎಂದೂ ಫಲ ನೀಡುವುದಿಲ್ಲ. ಜೆಡಿಎಸ್‌ಗೆ ಬಿದ್ದ ಮತ ಭೂಮಿಗೆ ಬಿದ್ದ ಬೀಜದಂತೆ. ಎಂದೆಂದಿಗೂ ಫಲ ನೀಡುತ್ತದೆ. ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವಾಗಿ ನಮಗೆ ಮತದಾನದ ಹಕ್ಕು ಸಿಕ್ಕಿದೆ. ಅಂಬೇಡ್ಕರ್ ಮರಣ ಹೊಂದಿದಾಗ ದೆಹಲಿಯಲ್ಲಿ ಅವರ ಸಮಾಧಿಗೆ ಕಾಂಗ್ರೆಸ್ ಜಾಗವನ್ನೂ ನೀಡಲಿಲ್ಲ. ಬಿಜೆಪಿ ಕೂಡ ಭಾರತ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿಕೊಂಡು ಈ ನೆಲ ಮೂಲದ ಬಹುಸಂಖ್ಯಾತರಿಗೆ ಅಮಾವನಿಸುತ್ತಲೇ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸಂವಿಧಾನದ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಿಸಿವೆ ಎಂದು ದೂರಿದರು.

1985ರಲ್ಲಿ ಎಚ್.ಡಿ.ದೇವೇಗೌಡರ ಶ್ರಮದಿಂದ ದಲಿತ ನಾಯಕರಾದ ಎಚ್.ಕೆ.ಕುಮಾರಸ್ವಾಮಿ, ಎಚ್.ಸಿ. ಮಹದೇವಪ್ಪ, ಬಿ.ಬಿ.ನಿಂಗಯ್ಯ, ಬಿ.ಟಿ.ಲಲಿತಾನಾಯ್ಕ ಮುಂತಾದವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಿ ಮಂತ್ರಿಗಳನ್ನಾಗಿ ಮಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ದಲಿತ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡು ದಲಿತರನ್ನು ಅಧಿಕಾರದಿಂದ ದೂರ ಇಟ್ಟಿದ್ದವು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮ ಪಾಲು ಎನ್ನುವ ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಲು ಸಮಿತಿ ಕಾರ್ಯಪ್ರವೃತ್ತವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯ ಸಂಯೋಜಕ ನಾರಾಯಣದಾಸ್, ಜಿಲ್ಲಾ ಸಂಯೋಜಕ ಚೌಡಹಳ್ಳಿ ಜಗದೀಶ್, ಮಂಜು ತ್ಯಾಗಿ, ಜಿಲ್ಲಾ ಕಾರ್ಯದರ್ಶಿ ನವೀನ್ ಸಾಲಗಾಮೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್ ದೊಡ್ಡಬಾಗೇನಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net