

ವಿಜಯಪುರ: ಹಿರಿಯ ಕಲಾವಿದ ದಿ. ಶ್ರೀ ಎಂ ಬಿ ಪಾಟೀಲ್ ಅವರ ಪುಣ್ಯಸ್ಮರಣೆಯ ಅಂಗವಾಗಿ ವಿಜಯಪುರ ನಗರದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಆರ್ಟ್ ಗ್ಯಾಲರಿಯಲ್ಲಿ ಕ್ಯಾನವಾಸ್ ಆರ್ಟ್ ಫೌಂಡೇಷನ್ ವತಿಯಿಂದ ದ್ವಿತೀಯ ರಾಜ್ಯ ಮಟ್ಟದ ಕಲಾ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಮಹೇಂದ್ರರವರು ಮಾತನಾಡಿ ದೃಶ್ಯ ಕಲೆ ವಿಶ್ವಭಾಷೆ ಅದನ್ನು ಪ್ರಾಥಮಿಕ ಹಂತದಿಂದ ವಿದ್ಯಾಭ್ಯಾಸದಿಂದಲೇ ಪ್ರಾರಂಭಿಸಿದರೆ ಆ ವಿಧ್ಯಾರ್ಥಿ ಜೀವನದಲ್ಲಿ ಒಬ್ಬ ಶ್ರೇಷ್ಠ ವ್ಯಕ್ತಿಯಾಗುತ್ತಾನೆ ಎಂದರು. ಕಲೆಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಕ್ಯಾನವಾಸ್ ಆರ್ಟ್ ಫೌಂಡೇಷನ್ ಮೂಲಕ ರಮೇಶ ಚವ್ಹಾಣ ಯಶಸ್ವಿಯಾಗಿಸಿದ್ದಾರೆ ಎಂದರು. ಬಳಿಕ ಏಳು ಜನ ಕಲಾವಿದರಿಗೆ ನಾಡಿನ ಹಿರಿಯ ಕಲಾವಿದ ಡಾ. ವಿ.ಜಿ. ಅಂದಾನಿಯವರು ಪ್ರಶಸ್ತಿ ಪ್ರಧಾನ ಮಾಡಿದ್ರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುವ ಭಾರತ ಸಮಿತಿಯ ಅಧ್ಯಕ್ಷ ಉಮೇಶ ಕಾರಜೋಳ ವಿಜಯಪುರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಮಾಡಿದ್ದು ಅತ್ಯಂತ ಮಹತ್ವದ ಕೆಲಸವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪಾಚಾರ್ಯ ಡಾ. ಎಸ್.ಟಿ. ಮೇರವಾಡೆಯವರು ಮಾತನಾಡಿ ಮಾನವನಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯದ ಗಂಧ ಇರದಿದ್ದರೆ ಅವನು ಯಾವುದರಲ್ಲಿಯೂ ಸಲ್ಲುವುದಿಲ್ಲ ಎಂದರು. ಬಳಿಕ ದೇಶದ ಪ್ರಸಿದ್ದ ಕಲಾವಿದ ಪುಣೆಯ ಎಂ ನಾರಾಯನ್ ಅವರಿಂದ ಕಲಾ ಪ್ರಾತ್ಯಕ್ಷೀಕೆ ನಡೆಯಿತು. ಪ್ರದರ್ಶನದಲ್ಲಿ ಬಹುಮಾನ ವಿಜೇತರಾದ ಅರುಣಕುಮಾರ ಕೆ.ವಿ ಮಂಗಳೂರು, ನಾಗಶಯನ ಮೈಸೂರು, ಆಂಜನೇಯ ನಾಯಕ್ ದಾವಣಗೆರೆ, ಶಿವನಾಗ ಚವ್ಹಾಣ ತುಮಕೂರು, ಸಂತೋಷಸಿಂಗ್ ಹಜೇರಿ ಮುಧೋಳ, ಪ್ರೋತ್ಸಹಕ ಬಹುಮಾನ ವಿಶ್ವನಾಥ ಹಂಡಿ ವಿಜಯಪುರ, ವಿಜಯಕುಮಾರ ಎಸ್. ಕಲಬುರಗಿ, ಇವರಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಿ ಎಸ್ ಪಾಟೀಲ್, ಲಿಂಗರಾಜ ಕಾಚಾಪುರ, ಇಂದ್ರಕುಮಾರ ದಸ್ತೇನವರ, ಸತೀಶ ಕಲಾಲ್ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು.