

ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ
ಪಟ್ಟಣದ ನ್ಯೂ ಆಕ್ಸ್‌ಫರ್ಡ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎನ್.ಸುಭಾಷ್ ಗೌಡ ಮತ್ತು 9ನೇ ತರಗತಿಯ ಎಚ್.ಡಿ.ದೊರೆ ಜಿಲ್ಲಾ ಮಟ್ಟದ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಕೆ.ಶೆಟ್ಟಹಳ್ಳಿ ಗ್ರಾಮದ ನಿಂಗರಾಜು ಅವರ ಪುತ್ರ ಎನ್.ಸುಭಾಷ್ 400 ಹಾಗೂ 600 ಮೀ. ಓಟದ ಸ್ಪರ್ಧೆಗಳಲ್ಲಿ ಪಾರಮ್ಯ ಮೆರೆದಿದ್ದು, ನ. 15ರಂದು ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾನೆ. ಇದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಎಚ್.ಡಿ.ದೊರೆ 1,500 ಮೀ. ಮತ್ತು 3 ಸಾವಿರ ಮೀ. ಓಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆಂದು ಪ್ರಾಂಶುಪಾಲೆ ಭಾಗ್ಯಮ್ಮ ತಿಳಿಸಿದ್ದಾರೆ.